

ಕಾರವಾರ: ಶಿರೂರು ಗುಡ್ಡ ಕುಸಿತ ಸಂಭವಿಸಿ ಶುಕ್ರವಾರಕ್ಕೆ 1 ತಿಂಗಳು ಕಳೆದಿದೆ. ಗಂಗಾವಳಿ ನದಿಯಲ್ಲಿ ಬಿದ್ದ ಲಾರಿ, ಮೃತ ದೇಹ ಹಾಗೂ ಇತರ ಅವಶೇಷಗಳನ್ನು ತೆರವು ಮಾಡುವ ಕಾರ್ಯ ಇನ್ನೂ ಮುಂದುವರಿದಿದೆ.
ಉಡುಪಿಯ ಮುಳುಗು ತಜ್ಞ ಈಶ್ವರ ಮಲ್ಪೆ ಹಾಗೂ ಅವರ ತಂಡ ಸತತ ನಾಲ್ಕನೇ ದಿನ ಶಿರೂರಿನಲ್ಲಿ ಕಾರ್ಯಾಚರಣೆ ನಡೆಸಿತು. ಮೂರು ದಿನ ಶಿರೂರಿನಲ್ಲಿ ಸತತ ಐದಾರು ತಾಸು ನೀರಿನಾಳದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ನದಿಯಲ್ಲಿ ಮುಳುಗಿರುವ ಆಲದ ಮರಕ್ಕೆ ರೋಪ್ ಕಟ್ಟಿ ಕ್ರೇನ್ ಮೂಲಕ ಎಳೆಯುವ ಯತ್ನ ನಡೆಯಿತು. ಆದರೆ, ಭಾರಿ ಮಳೆ ಹಾಗೂ ಹೆಚ್ಚಿದ ನದಿಯ ನೀರಿನ ಹರಿವಿನ ಕಾರಣದಿಂದ ಕಾರ್ಯಾಚರಣೆ ಸ್ಥಗಿತವಾಯಿತು.
ಕುಸಿತದಿಂದ ಗಂಗಾವಳಿ ನದಿಯಲ್ಲಿ ಸೃಷ್ಟಿಯಾದ ದ್ವೀಪದಡಿ 2 ಲಾರಿಗಳ ಬಿಡಿ ಭಾಗಗಳು ಸಿಗುತ್ತಿದ್ದು, ಲಾರಿ ಇಲ್ಲೇ ಇರಬಹುದು ಎಂಬುದು ಮುಳುಗು ತಜ್ಞ ಈಶ್ವ ರ ಮಲ್ಪೆ ಅವರ ಅಂಬೋಣ. ಅಡ್ಡಲಾಗಿ ಬಿದ್ದ ಆಲದ ಮರ, ಅದರ ಮೇಲೆ ಬಿದ್ದ ಕಲ್ಲು ಮಣ್ಣುಗಳು ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿವೆ ಎಂದು ಅವರು ತಿಳಿಸಿದ್ದಾರೆ.
ಬಾರ್ಜ್ ಮೂರ್ನಾಲ್ಕು ದಿನ ವಿಳಂಬ
ಗೋವಾದಿಂದ ಬಾರ್ಜ್ನ್ನು ಜಲಮಾರ್ಗದಲ್ಲಿ ತಂದು ಕಾರ್ಯಾಚರಣೆ ನಡೆಸಲು ಯೋಜಿಸಲಾಗಿದೆ. ಬಂದರು ಇಲಾಖೆಗೆ ಜವಾಬ್ದಾರಿ ವಹಿಸಲಾಗಿದೆ. ಆದರೆ, ಗಂಗಾವಳಿ ನದಿಯಲ್ಲಿ ಬಾರ್ಜ್ ಎಳೆದಿ ತರಬೇಕಾಗಿದ್ದು, ಕಾರ್ಯ ಇನ್ನೂ ಮೂರ್ನಾಲ್ಕು ದಿನ ವಿಳಂಬವಾಗಬಹುದು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀ ಪ್ರಿಯಾ ತಿಳಿಸಿದ್ದಾರೆ.