

ಕಾರವಾರ: ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ನಾಪತ್ತೆಯಾದವರ ಶೋಧ ಕಾರ್ಯಾಚರಣೆಯನ್ನು ಜಿಲ್ಲಾಡಳಿತ ಬಂದ್ ಮಾಡಿರುವುದಕ್ಕೆ ಕೇರಳ ಸರ್ಕಾರ ತೀವ್ರ ಆಟ್ಷೇಪ ವ್ಯಕ್ತಪಡಿಸಿದೆ.
ಗಂಗಾವಳಿ ನದಿ ನೀರಿನ ಹರಿವು ಅತಿ ವೇಗವಾಗಿ ಇರುವ ಕಾರಣ ಜಿಲ್ಲಾಡಳಿತ ಭಾನುವಾರ ಮಧ್ಯಾಹ್ನದಿಂದ ಕಾರ್ಯಾಚರಣೆ ಸ್ಥಗಿತ ಮಾಡಿತ್ತು. ಬೆಳಗಾವಿಯಿಂದ ಆಗಮಿಸಿದ ಮರಾಠಾ ಲೈಟ್ ಇನೆಂಟರಿ ಸೈನಿಕರು, ನೌಕಾನೆಲೆ ಮುಳುಗು ತಜ್ಞರು ಮರಳಿದ್ದಾರೆ. ಎನ್‌ಡಿಆರ್‌ಎಫ್, ಎಸ್‌ಡಿ ಆರ್‌ಎಫ್ ಅಂಕೋಲಾದಲ್ಲೇ ಇದ್ದರೂ ಸೋಮವಾರ ಕಾರ್ಯಾಚರಣೆಗೆ ಇಳಿಯಲಿಲ್ಲ.
ಅಂಕೋಲಾದಲ್ಲೇ ಬೀಡು ಬಿಟ್ಟಿದ್ದ ಕೇರಳ ಕಲ್ಯಾಶೇರಿ ಶಾಸಕ ವಿಜಿನ್, ತ್ರಿಕರಪುರ ಶಾಸಕ ರಾಜಗೋಪಾಲನ್ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ ಸೈಲ್ ಹಾಗೂ ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ ಅವರನ್ನು ಭಾನುವಾರ ಭೇಟಿಯಾಗಿ ಅಸಮಾಧಾನ ಹೊರ ಹಾಕಿದರು. ಪತ್ತೆಯಾದವರ ಅವಶೇಷಗಳು ಸಿಗುವವರೆಗೂ ಯಾವುದೇ ಕಾರಣಕ್ಕೂ ಕಾರ್ಯಾಚರಣೆ ನಿಲ್ಲಿಸಬಾರದು. ಆದರೆ, ಕಾರ್ಯಾಚರಣೆ ನಿಲ್ಲಿಸುವ ಬಗ್ಗೆ ಏಕೆ ಮಾಹಿತಿ ನೀಡಿಲ್ಲ ಎಂದು ಪ್ರಶ್ನಿಸಿದರು.
ಸ್ಥಳೀಯರಾದ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಅವರ ಪತ್ತೆಯಾಗಬೇಕಿದೆ. ಅರ್ಜುನ್ ಕೇರಳದವರಾದ ಕಾರಣ ಮುಖ್ಯಮಂತ್ರಿ ಪಿಣರಾಯಿ ವಿಜಯ್ ಅವರು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಶಾಸಕ ವಿಜಿನ್ ತಮ್ಮ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ ಎಂದು ಸ್ಥಳದಲ್ಲಿದ್ದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವಕರರ್ ಮಾಹಿತಿ ನೀಡಿದ್ದಾರೆ.
ಗಂಗಾವಳಿ ನದಿಯಲ್ಲಿ ಶೋಧ ಕಾರ್ಯಕ್ಕೆ ಕೇರಳ ತ್ರಿಶೂರ್‌ನಿಂದ ಹೂಳೆತ್ತುವ ಯಂತ್ರವನ್ನು ಕಳಿಸಿಕೊಡುವ ಬಗ್ಗೆ ಅಲ್ಲಿನ ಸರ್ಕಾರ ಮಾತುಕತೆ ನಡೆಸಿದೆ. ಅಗ್ರೋ ಕ್ರಾಫ್ಟ್ ಡ್ರಜ್ಜಿಂಗ್ ಯಂತ್ರವನ್ನು ತ್ರಿಶೂರ್ ಜಿಲ್ಲಾಽಕಾರಿ ಪರಿಶೀಲನೆ ನಡೆಸಿದ್ದು, ಅದನ್ನು ಕಳಿಸಿಕೊಡಲು ಎಲ್ಲ ಸಿದ್ಧತೆ ಕೈಗೊಂಡಿರುವುದಾಗಿ ಕೇರಳ ಮಾಧ್ಯಮಗಳು ವರದಿ ಮಾಡಿವೆ.
ಆದರೆ, ಗಂಗಾವಳಿ ನದಿಯಲ್ಲಿ ನೀರು ಸದ್ಯ ಪ್ರತಿ ಗಂಟೆಗೆ 6 ನಾಟಿಕಲ್ ಮೈಲ್ ವೇಗದಲ್ಲಿ ಹರಿಯುತ್ತಿದೆ. ಗರಿಷ್ಠ 2 ನಾಟಿಕಲ್ ಮೈಲ್ ವೇಗದಲ್ಲಿ ನೀರು ಹರಿದರೆ ಯಾವುದೇ ಯಂತ್ರ ಕಾರ್ಯಾಚರಣೆ ಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ರಿಜ್ ಮೌಂಟೆಡ್ ಡ್ರಜ್ಜಿಂಗ್ ನಡೆಸುವ ಬಗ್ಗೆ ಕೇರಳ ತ್ರಿಶೂರ್‌ನ ತಾಂತ್ರಿಕ ತಜ್ಞರಿಂದ ಲಿಖಿತ ವರದಿ ಕೋರಿದ್ದು, ಅವರ ವರದಿಯಂತೆ ನೌಕಾಸೇನೆ, ಕೋಸ್ಟ್ ಗಾರ್ಡ್, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಅಗ್ನಿಶಾಮಕ ಇಲಾಖೆ ವತಿಯಿಂದ ಕಾರ್ಯಾಚರಣೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ. ಜು.30 ರಂದು ಬೋಟ್‌ಗಳ ಮೂಲಕ ಹುಡುಕಾಟ ನಡೆಸಲಾಗುವುದು ಎಂದು ಅವರು ವಿವರಿಸಿದ್ದಾರೆ.