

ಉಡುಪಿ: ಅನ್ನಬ್ರಹ್ಮನೆಂದೇ ಖ್ಯಾತಿ ಪಡೆದ ಕೃಷ್ಣನ ಪೂಜಾ ಕೈಂಕರ್ಯವನ್ನು ಕೈಗೊಳ್ಳುತ್ತಿರುವ ಭಾವೀ ಪರ್ಯಾಯ ಶೀರೂರು ಮಠದ ಮೂರನೇ ಮೂಹೂರ್ತ ಕಟ್ಟಿಗೆ ಮೂಹೂರ್ತ ಜುಲೈ 13ರಂದು ಬೆಳಿಗ್ಗೆ 9.15 ರ ಸಿಂಹ ಲಗ್ನದಲ್ಲಿ ನಡೆಯಲಿದೆ. ಕಟ್ಟಿಗೆ ರಥ ನಿಮಾರ್ಣ ಕಾರ್ಯ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನೆರವೇರಲಿದೆ ಎಂದು ಮಠದ ದಿವಾನ್ ಡಾ. ಉದಯ್ ಕುಮಾರ್ ಸರಳತ್ತಾಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಕಿ ಮತ್ತು ಇನ್ನಿತರ ಧಾನ್ಯಗಳನ್ನು ಕಟ್ಟಿಗೆ ಉರಿಯಲ್ಲಿಯೇ ಬೇಯಿಸಿ ಭಗವಂತನಿಗೆ ನೈವೇದ್ಯವಾಗಿ ಸಮರ್ಪಿಸುವುದು ಮಠದ ನಿಯಮ. ಇದಕ್ಕೆ ಬೇಕಾಗುವ ಕಟ್ಟಿಗೆ ಸಂಗ್ರಹಣೆಯ ತಯಾರಿಯೇ ಕಟ್ಟಿಗೆ ಮುಹೂರ್ತ ಎಂದು ಪ್ರಸಿದ್ಧವಾಗಿದೆ. ಕಟ್ಟಿಗೆಯನ್ನು ಆಷಾಢ ಮಾಸದಲ್ಲಿಯೇ ಸಂಗ್ರಹಿಸುವ ನಿಯಮವಿದೆ. ಮಳೆಗಾಲವಾದ್ದರಿಂದ ಕಡಿದ ಮರಗಿಡಗಳು ಮತ್ತೆ ಚಿಗುರಿ 16 ವರ್ಷಗಳ ತನಕ ಬೆಳೆಯಲು ಸಹಕಾರಿಯಾಗುತ್ತದೆ. ತುದಿ ಹೆಚ್ಚಿರುವ ಕರಿ (ಕಮಾರ್ರು) ಮರದ ಸುಮಾರು 25 ಲಾರಿ ಕಟ್ಟಿಗೆಯನ್ನು ಸಂಗ್ರಹಿಸಿ, ಅದನ್ನು ಮಧ್ವ ಸರೋವರದ ಈಶಾನ್ಯ ಮೂಲೆಯಲ್ಲಿ ಸುಮಾರು 50 ಅಡಿ ಎತ್ತರದ 25 ಅಡಿ ಅಗಲದ ಕಲಾತ್ಮಕವಾದ ರಥದ ಮಾದರಿಯಲ್ಲಿ ಜೋಡಿಸಲಾಗುತ್ತದೆ. ತುದಿಯಲ್ಲಿ ಶಿಖರ, ಪತಾಕೆಯನ್ನಿರಿಸಿ ಸಿಂಗರಿಸಲಾಗುತ್ತದೆ ಎಂದರು.
ಕಲ್ಸಂಕದಿಂದ ಮೆರವಣಿಗೆ
13ರಂದು ಬೆಳಿಗ್ಗೆ 7.30ಕ್ಕೆ ಶೀರೂರು ಮಠದಲ್ಲಿ ಶ್ರೀವೇದವರ್ಧನ ತೀರ್ಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ನವಗ್ರಹ ಇತ್ಯಾದಿ ಪ್ರಾರ್ಥನೆಯೊಂದಿಗೆ ವೇದಘೋಷ, ಕೊಂಬು, ಕಹಳೆ, ವಾದ್ಯ ಬಿರುದಾವಳಿಯ ಜೊತೆಯಲ್ಲಿ ಕಲ್ಸಂಕದ ಲಕ್ಷಿ$್ಮ ತೋಟದಿಂದ ಎತ್ತಿನಗಾಡಿ, ಕೈಗಾಡಿಗಳಲ್ಲಿ ಕಟ್ಟಿಗೆಯನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಸಾಗುತ್ತಾರೆ. ಚಂದ್ರಮೌಳೀಶ್ವರ, ಶ್ರೀಆನಂತೇಶ್ವರ, ಕೃಷ್ಣಮುಖ್ಯಪ್ರಾಣ ಹಾಗೂ ಗರುಡನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಅಲ್ಲಿಂದ ನಿಗದಿಪಡಿಸಿದ ಸ್ಥಳದಲ್ಲಿ ಪೂಜಾದಿಗಳನ್ನು ಸಲ್ಲಿಸಿ ಪ್ರಾರ್ಥನೆಗೈದು ಕಟ್ಟಿಗೆ ರಥ ನಿಮಾರ್ಣ ಕಾರ್ಯಕ್ಕೆ ಚಾಲನೆ ದೊರೆಯಲಿದೆ ಎಂದರು.
50 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ದೀಪಾಲಂಕಾರ
ಶೀರೂರು ಮಠದ ಪರ್ಯಾಯ ಅಂಗವಾಗಿ ನಗರದಲ್ಲೆಡೆ ನಗರಸಭೆ ವತಿಯಿಂದ ಪ್ರಥಮ ಬಾರಿಗೆ 50 ಲಕ್ಷ ರೂ. ವೆಚ್ಚದಲ್ಲಿ ಮೈಸೂರು ದಸರಾ ಮಾದರಿಯಲ್ಲಿ ವಿದ್ಯುತ್ದೀಪಾಲಂಕಾರ ನಡೆಸಲು ತೀರ್ಮಾನಿಸಲಾಗಿದೆ. ಪ್ರತಿ ಪರ್ಯಾಯಕ್ಕೂ ಈ ಯೋಜನೆ ಮುಂದುವರಿಸಲಾಗುವುದು. ಈ ಬಾರಿ ವಿಶೇಷವಾಗಿ ಜ.9ರಂದು ಕಡಿಯಾಳಿಯಿಂದ ಶಿರೂರು ಶ್ರೀಗಳ ಪುರಪ್ರವೇಶ ನಡೆಯಲಿದ್ದು, ಕಡಿಯಾಳಿಯಿಂದ ಕಿನ್ನಿಮೂಲ್ಕಿ ಸ್ವಾಗತಗೋಪುರದವರೆಗೆ ವಿದ್ಯುತ್ ದೀಪಗಳು ಕಂಗೊಳಿಸಲಿವೆ ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದರು.
ಸ್ವಾಗತ ಸಮಿತಿ ಸದಸ್ಯ ಮೋಹನ್ ಭಟ್, ನಂದನ್ ಜೈನ್, ಮ್ಯಾನೇಜರ್ ವಾಸುದೇವ ಆಚಾರ್ಯ ಉಪಸ್ಥಿತರಿದ್ದರು.