ಶೀರೂರು ಮಠದಲ್ಲಿ ರಾಮ ನವಮಿ ಮಹೋತ್ಸವ

udp-5-shiroor
Published on

ಉಡುಪಿ: ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಆಶಯದಂತೆ ಹರಿಖಂಡಿಗೆಯ ಶ್ರೀ ಶೀರೂರು ಮೂಲ ಮಠದಲ್ಲಿ ಏ. 9 ರಿಂದ 18 ರವರೆಗೆ ಶ್ರೀ ರಾಮ ನವಮಿ ಮಹೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಠದ ದಿವಾನ ಡಾ. ಎಂ. ಉದಯಕುಮಾರ್​ ಸರಳತ್ತಾಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುಮಾರು 70 ವರ್ಫಿಗಳ ಹಿಂದೆ ಶ್ರೀ ಶೀರೂರು ಮಠದ ಪರಂಪರೆಯ ಶ್ರೀ ಲಕ್ಷ್ಮೀ0ದ್ರ ತೀರ್ಥ ಶ್ರೀಪಾದರು ಪ್ರಾರಂಭಿಸಿದ್ದ ಶ್ರೀರಾಮ ನವಮಿ ರಥೋತ್ಸವ ಅನೇಕ ವರ್ಷಗಳಿಂದ ಸ್ಥಗಿತಗೊಂಡಿದ್ದು, ಈ ವರ್ಷದಿಂದ ಮತ್ತೆ ಪ್ರಾರಂಭಿಸಲಾಗಿದೆ. ಏ. 11ರಂದು ಸಾಯಂಕಾಲ 4 ಗಂಟೆಗೆ ಶ್ರೀ ಚಿತ್ರಾಪುರ ಮಠದ ಶ್ರೀ ವಿದ್ಯೆಂದ್ರ ಶ್ರೀಪಾದರು, 13ರಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, 14ರಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, 17 ರಂದು ರಥೋತ್ಸವದಲ್ಲಿ ಉಡುಪಿ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಭಾಗವಹಿಸಲಿದ್ದಾರೆ ಎಂದರು.

ವಿಶೇಷ ಧಾರ್ಮಿಕ ಕಾರ್ಯಕ್ರಮ
ಏ. 10 ರಿಂದ 18 ರವರೆಗೆ ಹಯಗ್ರೀವ ಮಂತ್ರ ಹೋಮ, ಶಾಕಲ ಋಕ್​ ಸಂಹಿತಾಯಾಗ, ಘೋಷ್ಠಿಪಾರಾಯಣ, ಲಕ್ಷ್ಮೀಶೋಭಾನೆ ಗಾಯನ ನಡೆಯಲಿದ್ದು, ಏ. 13 ರಂದು ಭೂತರಾಜರ ಪೂಜೆ, 17 ರಂದು ಶ್ರೀಕ್ಷೇತ್ರದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಲಿದೆ. ಏ. 18 ರಂದು ಬೆಳಿಗ್ಗೆ 9ಕ್ಕೆ ಹಗಲು ರಥೋತ್ಸವ, ಅವಭ್ರತ ಸ್ನಾನ ಹಾಗೂ ರಾತ್ರಿ 9ಕ್ಕೆ ಬೊಬ್ಬರ್ಯ ನೇಮೋತ್ಸವವು ನಡೆಯಲಿದೆ ಎಂದು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮ
9 ರಂದು ಕುಣಿತ ಭಜನೆ ಮತ್ತು ಭಕ್ತಿರಸ ಮಂಜರಿ, 10 ರಂದು ಕುಂಜಾರುಗಿರಿ ಬಳಗದಿಂದ "ಛತ್ರಪತಿ ಶಿವಾಜಿ" ಐತಿಹಾಸಿಕ ನಾಟಕ, 11 ಕ್ಕೆ ಶ್ರೀ ಗಂಗಾ ಶಶಿಧರನ್​ ಇವರ ವಯಲಿನ್​ ವಾದನ, 12 ರಂದು ಮಾರ್ಪಳ್ಳಿ ಚೆಂಡೆ ಬಳಗದವರಿಂದ "ಊರ ಪರ್ಬ" ನಾಟಕ, 13 ರಂದು ಸುಧೀರ್​ ಕೊಡವೂರು ತಂಡದಿಂದ "ಶ್ರೀನರಸಿಂಹ" ನೃತ್ಯ ರೂಪಕ, 14 ರಂದು ಕುದ್ರೋಳಿ ಗಣೇಶ್​ ರವರಿಂದ ಮ್ಯಾಜಿಕ್​ ಶೋ, 15 ರಂದು ಮೈಸೂರು ರಾಮಚಂದ್ರ ಆಚಾರ್ಯ ರವರಿಂದ ಭಕ್ತಿ ಸಂಗೀತ, 16 ರಂದು ಪದ್ಮಶ್ರೀ ಪಂಡಿತ್​ ವೆಂಕಟೇಶ್​ ಕುಮಾರ್​ ರವರಿಂದ ಹಿಂದೂಸ್ಥಾನಿ ಗಾಯನ, 17 ರಂದು ಕಾಂತಾರ ಚಲನಚಿತ್ರ ಖ್ಯಾತಿಯ ಶ್ರೀ ಸಾಯಿ ವಿಶ್ವೇಶ್​ ರವರಿಂದ ಸಂಗೀತ, ಹಾಗೂ ಕಟೀಲು ದುರ್ಗಾ ಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಮಠದ ಪಾರುಪತ್ಯೆಗಾರರಾದ ಶ್ರೀಶಭಟ್​ ಕಡೆಕಾರು, ಮ್ಯಾನೇಜರ್​ ವಾಸುದೇವ ಆಚಾರ್ಯ, ಅಶ್ವತ್ಥ್​ ಭಾರಧ್ವಾಜ್​, ವಾಮನ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net