

ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ಬಿ.ವಿ. ಶಿರೂರ ಸೃಜನಶೀಲ ಸಂಶೋಧಕರು. ಸಂಶೋಧನೆಯಲ್ಲಿರಬೇಕಾದ ಸಮಾಧಾನ, ನಿರಂತರತೆ, ನಿಶ್ಚಲವಾದ ಮನಸ್ಸು ಅವರಲ್ಲಿದೆ. ಅವರೊಬ್ಬ ಈ ನಾಡಿನ ಗಂಭೀರ ಸ್ವರೂಪದ, ಅಪರೂಪದ ಸಂಶೋಧಕರಾಗಿದ್ದಾರೆ ಎಂದು ಕವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ಜೆ.ಎಂ. ನಾಗಯ್ಯ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹೆಸರಾಂತ ಸಂಶೋಧಕ ಡಾ. ಬಿ.ವಿ. ಶಿರೂರ ದತ್ತಿ ನಿಮಿತ್ತ ಏರ್ಪಡಿಸಿದ್ದ ಡಾ. ಬಿ.ವಿ. ಶಿರೂರ ಸಂಶೋಧನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಬಿ.ವಿ. ಶಿರೂರ ಸಂಶೋಧನೆ ಕುರಿತು ಉಪನ್ಯಾಸ ನೀಡಿದರು.
ಶಿರೂರ ಶ್ರೇಷ್ಠ ಸಂಶೋಧಕರಾಗಲು ಬೇಕಾದ ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ, ಸಮಯ ಪ್ರಜ್ಞೆ ಹಾಗೂ ನಿರಂತರತೆಯ ಮೌಲಿಕ ಗುಣ ಹೊಂದಿದ್ದಾರೆ. ಅವರು 400 ಸಂಶೋಧನಾ ಲೇಖನ ಹಾಗೂ 70ಕ್ಕೂ ಹೆಚ್ಚು ಗ್ರಂಥ ಪ್ರಕಟಿಸಿದ್ದಾರೆ. ಜೈನ ಧರ್ಮದ ಸಂಶೋಧನೆ ಬಗ್ಗೆ ಅತೀವ ಕಾಳಜಿ ಅವರಲ್ಲಿದೆ ಎಂದರು.
ಪ್ರಾಧ್ಯಾಪಕ ಡಾ. ಎಫ್. ಟಿ. ಹಳ್ಳಿಕೇರಿ ಮಾತನಾಡಿ, ನನ್ನ ಹಾಗೂ ಡಾ. ಕೆ. ರವೀಂದ್ರನಾಥ ಅವರದು ವೃತ್ತಿಪರ ಸಂಬಂಧ. ಹಸ್ತಪ್ರತಿ ಸಂಗ್ರಹಣೆ ಹಾಗೂ ಪರಿಷ್ಕರಣಾ ಕ್ಷೇತ್ರ ಕಾರ್ಯದಲ್ಲಿ ನಮ್ಮಿಬ್ಬರದು ದಣಿವರಿಯದ ಕಾರ್ಯ. ಎಷ್ಟೇ ಅಡೆತಡೆ ಎದುರಾದರೂ ಸಮರ್ಥವಾಗಿ ಕಾರ್ಯ ಮಾಡಿದ ತೃಪ್ತಿ ನಮ್ಮಲ್ಲಿದೆ. ಡಾ. ಕೆ. ರವೀಂದ್ರನಾಥ ಸಮಯ ಪ್ರಜ್ಞೆ, ಪರಿಶ್ರಮ, ಸಮರ್ಪಣಾ ಮನೋಭಾವದ ಸಂಶೋಧಕ ಎಂದರು.
ಡಾ. ಕೆ. ರವೀಂದ್ರನಾಥ ಅವರು ಡಾ. ಬಿ.ವಿ. ಶಿರೂರ ಸಂಶೋಧನಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಹಿರಿಯ ವಿದ್ವಾಂಸ ಡಾ. ಶಾಂತಿನಾಥ ದಿಬ್ಬದ ಅಧ್ಯಕ್ಷತೆ ವಹಿಸಿದ್ದರು. ಶಂಕರ ಹಲಗತ್ತಿ, ಡಾ. ಸುರೇಶ ಹೊರಕೇರಿ, ಬಿ. ಎಚ್. ಕೋಟಿಗೌಡರ, ಬಿ.ಜಿ. ಬಿರಾದಾರ, ಚಿದಾನಂದ ಮಾಸನಕಟ್ಟಿ, ಡಿ.ಬಿ. ಕರಡೋಣಿ, ಬಾಳಪ್ಪ ಚಿನಗುಡಿ, ಮಹಾಂತೇಶ ನರೆಗಲ್ಲ, ಈರಣ್ಣ ಇಂಜಗನೇರಿ, ಬಿ.ಕೆ. ಹೊಂಗಲ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಧನವಂತ ಹಾಜವಗೋಳ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.