ಶಿರಸಿ-ಹಾವೇರಿ ರಸ್ತೆ ಸಂಚಾರ ಸರಾಗ: ಒಚರಂಡಿ ವ್ಯವಸ್ಥೆ ಸರಿಪಡಿಸಿದ ಗ್ರಾಪಂ

Sirsi-haveri road
Published on

ಅಕ್ಕಿಆಲೂರ: ಪಟ್ಟಣದ ಬಸ್ ನಿಲ್ದಾಣದ ಬಳಿ ಶಿರಸಿ-ಹಾವೇರಿ ರಾಜ್ಯ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ಸಂಗ್ರಹಗೊಳ್ಳುತ್ತಿದ್ದ ಮಳೆ ನೀರು ಹರಿದು ಹೋಗಲು ಗ್ರಾಪಂ ಒಳಚರಂಡಿ ವ್ಯವಸ್ಥೆ ಸರಿಪಡಿಸಿದ್ದು, 7 ವರ್ಷಗಳ ಸಮಸ್ಯೆಗೆ ಮುಕ್ತಿ ದೊರೆತಂತಾಗಿದೆ.

ರಾಜ್ಯ ಹೆದ್ದಾರಿ ಅಭಿವೃದ್ಧಿಗೊಳಿಸುವ ಸಂದರ್ಭದಲ್ಲಿ ಹೊಸ್ ಬಸ್ ನಿಲ್ದಾಣದ ಬಳಿ ಅವೈಜ್ಞಾನಿಕ ಕಾಮಗಾರಿ ಕೈಗೊಂಡಿದ್ದರಿಂದ ಬನಶ್ರೀ ವಾಣಿಜ್ಯ ಮಳಿಗೆ ಎದುರು ಅಪಾರ ಪ್ರಮಾಣದ ನೀರು ಸಂಗ್ರಹವಾಗುತ್ತಿತ್ತು. ಇದರಿಂದ ವಾಹನ ಸವಾರರಿಗೆ, ಅಂಗಡಿ ವ್ಯಾಪಾರಸ್ಥರಿಗೆ ತೀವ್ರ ತೊಂದರೆಯುಂಟಾಗಿತ್ತು. ಈ ಕುರಿತು ಸಾರ್ವಜನಿಕರು ಅಧಿಕಾರಿಗಳು ಹಾಗೂ ಜನಪ್ರನಿಧಿಗಳಿಗೆ ತಿಳಿಸಿದರೂ ಪ್ರಯೋಜನವಾಗಿರಲಿಲ್ಲ. ಜು. 3ರಂದು ತಾಲೂಕು ಜೆಡಿಎಸ್ ವತಿಯಿಂದ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗಿತ್ತು. ಪ್ರತಿಭಟನೆಗೆ ಮಣಿದ ಸ್ಥಳೀಯ ಗ್ರಾಮ ಪಂಚಾಯಿತಿಯವರು ನೀರು ಹರಿಯಲು ಒಳಚರಂಡಿ ವ್ಯವಸ್ಥೆ ಕಲ್ಪಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಿದ್ದಾರೆ.

ಗ್ರಾಪಂ ಕಾರ್ಯಕ್ಕೆ ಪ್ರಶಂಸೆ

ಶಿರಸಿ-ಹಾವೇರಿ ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೇರಿದೆ. ಸದ್ಯ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಈಗಲೂ ಸಂಗ್ರಹವಾಗುತ್ತಿದ್ದ ನೀರು ಸರಾಗವಾಗಿ ಹರಿಯಲು ಯೋಗ್ಯ ಕ್ರಮಕೈಗೊಳ್ಳಲಿಲ್ಲ. ಸ್ಥಳೀಯ ಗ್ರಾಪಂ ಸಾವಿರಾರು ಜನತೆಗೆ ತೊಂದರೆಯಾಗುವುದನ್ನು ಮನಗಂಡು ಜೆಸಿಬಿಯಿಂದ ಎರಡು ದಿನಗಳ ಕಾಲ ನೀರು ಮುಂದೆ ಸಾಗಲು ಅನುಕೂಲ ಮಾಡಿಕೊಟ್ಟಿದೆ. ಇದರಿಂದ ಸಮಸ್ಯೆ ಪರಿಹಾರವಾಗಿದೆ. ಗ್ರಾಮ ಪಂಚಾಯಿತಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಗ್ರಾಪಂ ಅನುದಾನದಲ್ಲಿ ಜೆಸಿಬಿಯಿಂದ ಕಾಮಗಾರಿ ನಡೆಸಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಜನತೆ ಗ್ರಾಪಂಗೆ ಬಂದು ಅಳಲು ತೋಡಿಕೊಳ್ಳುತ್ತಿದ್ದ ಸಮಸ್ಯೆಗೆ ಇದೀಗ ಮುಕ್ತಿ ದೊರೆತಿದೆ. | ಕುಮಾರ ಮಕರವಳ್ಳಿ ಗ್ರಾಪಂ ಪಿಡಿಒ, ಅಕ್ಕಿಆಲೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net