

ಕೆ.ಎಸ್.ನಾಗೇಶ್ ಕುಶಾಲನಗರ
ಕೊಡಗು-ಹಾಸನ ಗಡಿ ಗ್ರಾಮ ಶಿರಂಗಾಲ ವಿವಿಧ ವಿಶೇಷತೆಗಳಿಗೆ ಹೆಸರುವಾಸಿಯಾಗಿದೆ. ಅಲ್ಲದೆ ಸೌಹಾರ್ಧತೆಗೂ ಮಾದರಿಯಾಗಿದೆ.
ಜಿಲ್ಲೆಯ ಗಡಿಗ್ರಾಮವಾದ್ದರಿಂದ ಶಿರಂಗಾಲ (ಶಿರ ಎಂದರೆ ತಲೆ, ಅಂಗಾಲ ಎಂದರೆ ಪಾದ) ಎನ್ನುವ ಅರ್ಥದಲ್ಲಿ ಶಿರಂಗಾಲ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.
ಕುಶಾಲನಗರದಿಂದ ಹಾಸನ ಮಾರ್ಗವಾಗಿ 16 ಕಿಲೋ ಮೀಟರ್ ತೆರಳಿದರೆ ಗ್ರಾಮ ಸಿಗಲಿದೆ. ಗ್ರಾಮದಲ್ಲಿ ಹಿಂದುಗಳು ಮಾತ್ರ ನೆಲೆಸಿದ್ದಾರೆ. ವಿವಿಧ ಜಾತಿ ಜನಾಂಗದವರು ಸೌಹಾರ್ಧತೆಯಿಂದ ಬದುಕುತ್ತಿದ್ದಾರೆ.
ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮನೆಗಳಿದ್ದು, 4ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಗ್ರಾಮದಲ್ಲಿ ಸಣ್ಣ ಹಿಡುವದಾರರು ಹೆಚ್ಚಿದ್ದಾರೆ. ಗ್ರಾಮದ ಬಹುತೇಕ ಮನೆಗಳಲ್ಲೂ ವಿದ್ಯಾವಂತರಿದ್ದು, ಪಟ್ಟಣದಲ್ಲಿ ವಿವಿಧ ಉದ್ಯೋಗದಲ್ಲಿದ್ದಾರೆ.
ಈ ಗ್ರಾಮದಲ್ಲಿ ನೆಲೆಸಿರುವ ಬಹುತೇಕ ಕುಟುಂಬಗಳು ಕೃಷಿ ಆಧಾರಿಸಿ ಬದುಕು ನಡೆಸುತ್ತಿದ್ದು, ಹೈನುಗಾರಿಕೆಗೂ ಒತ್ತು ನೀಡಲಾಗಿದೆ. ಗ್ರಾಮದಲ್ಲಿ ಪ್ರತಿ ದಿನ 2ಸಾವಿರ ಲೀಟರ್ ಹಾಲು ಉತ್ಪಾದನೆ ಆಗುತ್ತದೆ ಎಂದು ಗ್ರಾಮದ ಸಿ.ಎನ್. ಲೋಕೇಶ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಗ್ರಾಮದ ಯುವಕರು ಸಂಘಟಿತರಾಗಿ ಗ್ರಾಮದ ಅಭಿವೃದ್ಧಿಗೆ ಚಿಂತಿಸುವವರಾಗಿದ್ದು, ಗ್ರಾಮದಲ್ಲಿ ಹಲವು ಸಮಾಜಮುಖಿ ಕೆಲಸಗಳಿಗೆ ಒಗ್ಗಟ್ಟಿನಿಂದ ತೊಡಗಿಸಿಕೊಳ್ಳುತ್ತಾರೆ.
ಗ್ರಾಮದಲ್ಲಿ ಶಿರಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಕಾವೇರಿ ಗ್ರಾಮೀಣ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದ್ದು, ಲಕ್ಷಾಂತರ ವಹಿವಾಟು ನಡೆಯುತ್ತದೆ.
ಗ್ರಾಮದಲ್ಲಿ ಪಿಯುಸಿವರೆಗೆ ವಿದ್ಯಾಭ್ಯಾಸಮಾಡುವ ವ್ಯವಸ್ಥೆ ಇದ್ದು, ಖಾಸಗಿ ಹಾಗೂ ಸರ್ಕಾರಿ ವಿದ್ಯಾಸಂಸ್ಥೆಗಳಿವೆ. ನಂತರ ವಿದ್ಯಾಭ್ಯಾಸಕ್ಕೆ ಕೊಣನೂರು ಅಥವಾ ಕುಶಾಲನಗರಕ್ಕೆ ತೆರಳಬೇಕಿದೆ. ಗ್ರಾಮದ ರಸ್ತೆಗಳು ಉತ್ತಮ ಸ್ಥಿತಿಯಲ್ಲಿವೆ.
ಮಂಟಿಗಮ್ಮ ಗ್ರಾಮ ದೇವತೆ
ಗ್ರಾಮದೇವತೆಯಾಗಿ ಮಂಟಿಗಮ್ಮ ನೆಲೆಸಿದ್ದಾಳೆ. ಗ್ರಾಮಸ್ಥರು ಒಟ್ಟು ಸೇರಿ ಇತ್ತೀಚೆಗೆ 5ಕೋಟಿ ರೂ. ವೆಚ್ಚದಲ್ಲಿ ದೇವಾಲಯ ಪುನರ್ ನಿರ್ಮಾಣಮಾಡಿದ್ದಾರೆ. 2ವರ್ಷಕ್ಕೊಮ್ಮೆ ಯುಗಾದಿ ಕಳೆದು 15 ದಿನಗಳ ನಂತರ ಬರುವ ಶುಕ್ರವಾರ, ಶನಿವಾರ, ಭಾನುವಾರ ಅದ್ದೂರಿ ಉತ್ಸವ ನೆರವೇರಿಸಲಾಗುತ್ತದೆ.
ಗ್ರಾಮ ದೇವತೆಯ ಉತ್ಸವ ನಡೆಯುವ 15ದಿನ ಮೊದಲಿನಿಂದ ಗ್ರಾಮಸ್ಥರು ಮಾಂಸಾಹಾರ ಸೇವಿಸುವುದಿಲ್ಲ. ಉತ್ಸವ ಸಂದರ್ಭ, ಅನಾರೋಗ್ಯ ಪೀಡಿತರು, ಗರ್ಭಿಣಿಯರು ಸಂಬಂಧಿಕರೆ ಮನೆಗೆ ತೆರಳಿ ಮೈಲಿಗೆಯಾಗದಂತೆ ನೋಡಿಕೊಳ್ಳುತ್ತಾರೆ.
ಇತಿಹಾಸ ಪ್ರಸಿದ್ಧ ಉಮಾಮಹೇಶ್ವರ ದೇವಸ್ಥಾನ
ಐದು ನೂರು ವರ್ಷಗಳ ಇತಿಹಾಸ ಇರುವ ಉಮಾಮಹೇಶ್ವರ ದೇಗುಲ ಗ್ರಾಮದಲ್ಲಿದೆ. ಕಾವೇರಿ ನದಿ ತೀರದಲ್ಲಿ ಪ್ರಕೃತಿ ರಮಣಿಯ ಪರಿಸರದಲ್ಲಿ ದೇಗುಲವಿದ್ದು, ಈಶ್ವರ, ಪಾರ್ವತಿ, ಗಣಪತಿ ಮತ್ತು ಸುಬ್ರಹ್ಮಣ್ಯ ದೇವರನ್ನು ಒಂದೇ ಕಲ್ಲಿನಲ್ಲಿ ಕೆತ್ತನೆ ಮಾಡಿ ಪ್ರತಿಷ್ಠಾಪಿಸಿರುವುದು ಇಲ್ಲಿನ ವಿಶೇಷ. ಕಾಶಿ ಬಿಟ್ಟರೆ ಈ ರೀತಿಯ ಕೆತ್ತನೆ ಇರುವುದು ಇಲ್ಲಿ ಮಾತ್ರ ಎಂದು ಹೇಳಲಾಗುತ್ತದೆ. ಅತ್ಯಂತ ಶಕ್ತಿಶಾಲಿ ದೇವರು ಎಂಬ ನಂಬಿಕೆ ಜನರಲ್ಲಿದ್ದು, ಶ್ರದ್ಧಾಭಕ್ತಿಯಿಂದ ಗ್ರಾಮಸ್ಥರು ದೇವರ ಆರಾಧನೆ ಮಾಡುತ್ತಾರೆ.
ಸರ್ವಾಂಗೀಣ ಅಭಿವೃದ್ಧಿ
ಗ್ರಾಮಸ್ಥರು ವಿದ್ಯಾವಂತರಾದರೆ ಗ್ರಾಮವನ್ನು ಹೇಗೆ ಅಭಿವೃದ್ಧಿ ಪಡಿಸಬಹುದು ಎನ್ನುವುದಕ್ಕೆ ಶಿರಂಗಾಲ ಸಾಕ್ಷಿಯಾಗಿದೆ. ಗ್ರಾಮದ ಎಲ್ಲಾ ರಸ್ತೆಗಳು, ಚರಂಡಿ ಕಾಮಗಾರಿ ಪೂರ್ಣವಾಗಿದೆ. ಮನೆ ಮನೆಗೂ ಕುಡಿಯುವ ನೀರು ಸರಬರಾಜು ಮಾಡುವ ವ್ಯವಸ್ಥೆ ಇದೆ. ಯುವ ಜನಾಂಗ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಆಟದ ಮೈದಾನವಿದೆ. ಒಟ್ಟಿನಲ್ಲಿ ಗ್ರಾಮ ಒಂದಕ್ಕೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳು ಇಲ್ಲಿವೆ. ವಿವಿಧ ಜಾತಿ, ಜನಾಂಗದವರು ಇಲ್ಲಿ ನೆಲೆಸಿದ್ದರೂ ಕೂಡ ಯಾವುದೇ ರೀತಿಯ ಗೊಂದಲಗಳು ಏರ್ಪಡದೆ ಎಲ್ಲರೂ ಸೌಹಾರ್ಧಯುತವಾಗಿ ಬದುಕು ನಡೆಸುತ್ತಿದ್ದಾರೆ. ಗ್ರಾಮದಲ್ಲಿನ ಸಣ್ಣ-ಪುಟ್ಟ ಕಲಹಗಳ್ನು ಗ್ರಾಮದಲ್ಲೇ ಇತ್ಯರ್ಥಪಡಿಸಿಕೊಳ್ಳಲಾಗುತ್ತದೆ. ಬಹುತೇಕ ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರುವುದಿಲ್ಲ.