

ನಂಜನಗೂಡು: ತಾಲೂಕಿನ ಶಿರಮಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ 2024 -25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಘದ ಅಧ್ಯಕ್ಷ ಗುರುಸ್ವಾಮಿ, ಸಂಘ ಈ ಬಾರಿ 3 ಲಕ್ಷ ರೂ. ಲಾಭ ಪಡೆದಿದೆ. ಹೆಚ್ಚು ಸದಸ್ಯತ್ವವನ್ನು ಪಡೆದು ಸಂಘದ ಅಭಿವೃದ್ಧಿಗೆ ಶ್ರಮಿಸುವಂತಾಗಬೇಕು. ಹೈನುಗಾರಿಕೆಯನ್ನು ಉತ್ತೇಜಿಸುವ ಸಲಯವಾಗಿ ಪ್ರತಿ ವರ್ಷ ರಾಸುಗಳ ಮೇವಿಗಾಗಿ ಸಾಲದ ರೂಪದಲ್ಲಿ ಹಣ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಲವನ್ನು ನೀಡಿ ಸದಸ್ಯರ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು ಎಂದರು.
ಸಂಘದ ಆಭರಣದಲ್ಲಿ ಮಳಿಗೆಗಳನ್ನ ತೆರೆದು ಸಂಘಕ್ಕೆ ಆದಾಯ ತರುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಈಗಾಗಲೇ ಹಿಂದಿನ ವರ್ಷಗಳಲ್ಲಿ ಸುಮಾರು 20 ಲಕ್ಷ ಸುಸ್ತಿ ಸಾಲ ಇದ್ದು, ಇದು ವಸೂಲಿಯಾದರೆ ಸಂಘಕ್ಕೆ ಇನ್ನೂ ಹೆಚ್ಚಿನ ಆದಾಯ ಬಂದು, ಸದಸ್ಯರಿಗೆ ಕಡಿಮೆ ದರದಲ್ಲಿ ಸಾಲ ಸೌಲಭ್ಯ ನೀಡಬಹುದು ಎಂದರು.
ಸಂಘದ ಉಪಾಧ್ಯಕ್ಷ ಚನ್ನಬಸವಣ್ಣ, ನಿರ್ದೇಶಕರಾದ ಶಿವಶಂಕರಪ್ಪ, ಮಹೇಂದ್ರ, ಶಿವರಾಜಪ್ಪ, ಸಂಗಪ್ಪ, ನಾಗೇಶ್, ಸ್ವಾಮಿ ನಾಯಕ, ಪುಟ್ಟಸ್ವಾಮಿಗೌಡ, ಹುಚ್ಚಯ್ಯ, ರಮ್ಯಾ, ಸುಮಾ, ನಿರಂಜನ್, ಸಿಇಒ ಮಲ್ಲಿಕಾರ್ಜುನ ಸ್ವಾಮಿ, ಸಿಬ್ಬಂದಿ ಪರಶುರಾಮ ಗೌಡ, ಆನಂದ್ ಇತರರಿದ್ದರು.