

ನವಲಗುಂದ: ಪಿಡಿಒ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷರು, ಗ್ರಾಮಸ್ಥರು ಕೂಡಿಕೊಂಡು ಗ್ರಾಪಂಗೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ತಾಲೂಕಿನ ಶಿರಕೋಳ ಗ್ರಾಪಂನಲ್ಲಿ ಸೋಮವಾರ ನಡೆಯಿತು.
ಅಭಿವೃದ್ಧಿ ಅಧಿಕಾರಿ ಮಲ್ಲನಗೌಡ ದಾನಪ್ಪಗೌಡರ ಯಾವುದೇ ಕೆಲಸ ಮಾಡುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ವೇತನ ಪಾವತಿ ಮಾಡಿಲ್ಲ. 15ನೇ ಹಣಕಾಸು ಯೋಜನೆಯಡಿ ಅನೇಕ ಕಾಮಗಾರಿ ಪ್ರಾರಂಭಿಸಿಲ್ಲ. ಗ್ರಾಮದಲ್ಲಿ 3.80 ಲಕ್ಷ ರೂ. ವೆಚ್ಚದ ತ್ಯಾಜ್ಯ ವಿಲೇವಾರಿ ಘಟಕವನ್ನು 2.41 ಲಕ್ಷ ರೂಪಾಯಿ ವ್ಯಯಿಸಿ ನಿರ್ಮಾಣ ಮಾಡಲಾಗಿದೆ. ಘಟಕದ ಹೆಸರಲ್ಲಿ 99 ಸಾವಿರ ರೂಪಾಯಿ ಅಧ್ಯಕ್ಷರ ಪರವಾನಗಿ ಇಲ್ಲದೆ ತೆಗೆದಿದ್ದಾರೆ. ಎರಡು ವರ್ಷಗಳಿಂದ ಯಾವುದೇ ಕೆಲಸ ಮಾಡದೆ ಹಣ ದುರ್ಬಳಕೆ ಮಾಡಿಕೊಂಡು ಬೇಕಾಬಿಟ್ಟಿಯಾಗಿ ಅಧಿಕಾರ ನಡೆಸಿ, ಗ್ರಾಮದ ಅಭಿವೃದ್ಧಿ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಪಿಡಿಒ ವರ್ಗಾವಣೆಗೆ ಒತ್ತಾಯಿಸಿ ತಾಪಂ ಇಒ, ಜಿಪಂ ಸಿಇಒ ಶಾಸಕ ಎನ್.ಎಚ್. ಕೋನರಡ್ಡಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಆದರೂ, ಪ್ರಯೋಜನವಾಗಿಲ್ಲ. ರಾಜಕೀಯ ಪ್ರಭಾವ ಬಳಿಸಿ ಹಾಗೂ ಗ್ರಾಮಸ್ಥರ ನಡುವೆ ಜಗಳ ಹಚ್ಚಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧಾ ವಾಲಿಸುಂಕದ, ಉಪಾಧ್ಯಕ್ಷೆ ಶಾರವ್ವ ಶಾಸ್ತ್ರೀಮಠ, ಸದಸ್ಯರಾದ ಶಂಕ್ರವ್ವ ಮುಗಳಿ, ಶಾಂತವ್ವ ಕಡಕೋಳ, ಮಲ್ಲಪ್ಪ ನವಲಗುಂದ, ಜಗದೀಶ ಯಕ್ಕುಂಡಿ, ಮಲ್ಲಪ್ಪ ಗಾಣಿಗೇರ, ಗ್ರಾಮದ ಹಿರಿಯರು ಮತ್ತಿತರು ಇದ್ದರು.