ಶಿರಹಟ್ಟಿಯ ವಿವಾಹಿತ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ

Crime Logo
Published on

ರಾಣೆಬೆನ್ನೂರ: ವಿವಾಹಿತ ಪ್ರೇಮಿಗಳಿಬ್ಬರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗುಡಗೂರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಭಾನುವಾರ ಸಂಭವಿಸಿದೆ.
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕೊಕ್ಕರಗುಂದಿ ಗ್ರಾಮದ ಶಿವಯೋಗಿಸ್ವಾಮಿ ಹಿರೇಮಠ (45) ಹಾಗೂ ಹನುಮವ್ವ ಕಿಳ್ಳಿಕ್ಯಾತರ (35) ಆತ್ಮಹತ್ಯೆ ಮಾಡಿಕೊಂಡವರು.
ಇವರು ನ. 23ರಂದು ರಾಣೆಬೆನ್ನೂರ ನಗರಕ್ಕೆ ಬಂದಿದ್ದರು. ಅಲ್ಲದೆ ಕುಟುಂಬದವರು ಫೋನ್ ಮಾಡಿದಾಗ ನಾವಿಬ್ಬರೂ ಬೇರೆ ಊರಿಗೆ ಬಂದಿದ್ದು, ನಮ್ಮನ್ನು ಹುಡುಕಬೇಡಿ ಎಂದಿದ್ದರು. ಮರುದಿನ ಇಬ್ಬರು ಗುಡಗೂರ ಬಳಿಯ ಅರಣ್ಯ ಪ್ರದೇಶಕ್ಕೆ ತೆರಳಿ ವಿಷ ಸೇವಿಸಿದ್ದಾರೆ. ಈ ಸಮಯದಲ್ಲಿ ಶಿವಯೋಗಿಸ್ವಾಮಿಯ ಫೋನ್‌ಗೆ ಆತನ ಕುಟುಂಬದವರು ಫೋನ್ ಮಾಡಿದಾಗ ಹನುಮವ್ವ ಮಾತನಾಡಿ ನಾವಿಬ್ಬರೂ ವಿಷ ಸೇವಿಸಿದ್ದೇವೆ ಎಂದು ಹೇಳಿದ್ದಾಳೆ.
ಕೂಡಲೇ ಇಬ್ಬರ ಕುಟುಂಬದವರು ಅವರನ್ನು ಹುಡುಕುತ್ತ ಬಂದಾಗ ಶಿವಯೋಗಿಸ್ವಾಮಿ ಶವವಾಗಿ ಬಿದ್ದಿರುವುದು ಕಂಡು ಬಂದಿದೆ. ಹನುಮವ್ವ ಅಸ್ವಸ್ಥವಾಗಿ ಬಿದ್ದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ಆಕೆಯನ್ನು ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವಳೂ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೀತಿ, ಅನೈತಿಕ ಸಂಬಂಧ ಆರೋಪ…
ಶಿವಯೋಗಿಸ್ವಾಮಿ ಗ್ರಾಮದಲ್ಲಿ ವಾಟರ್‌ಮನ್ ಆಗಿ ಕೆಲಸ ಮಾಡುತ್ತಿದ್ದ. ಅದೇ ಗ್ರಾಮದ ಹನುಮವ್ವಳನ್ನು ಬೇರೆಡೆ ಮದುವೆ ಮಾಡಿಕೊಡಲಾಗಿತ್ತು. ಇಬ್ಬರಿಗೂ ಮಕ್ಕಳು ಸಹ ಇದ್ದಾರೆ. ಆದರೆ, ಕಳೆದ ಮೂರು ವರ್ಷದಿಂದ ಹನುಮವ್ವ ತವರುಮನೆ ಕೊಕ್ಕರಗುಂದಿಯಲ್ಲಿಯೆ ಬಂದು ವಾಸವಾಗಿದ್ದಳು. ಈ ನಡುವೆ ಇಬ್ಬರ ಮಧ್ಯೆ ಪ್ರೀತಿ ಬೆಳೆದು ಅದು ಅಕ್ರಮ ಸಂಬಂಧಕ್ಕೂ ಕಾರಣವಾಗಿತ್ತು ಎನ್ನಲಾಗಿದೆ. ಆದರೆ, ವಿಷಯ ಗ್ರಾಮದಲ್ಲಿ ಗೊತ್ತಾದರೆ ಏನು ಮಾಡೋದು ಎಂದು ಮರ್ಯಾದೆಗೆ ಅಂಜಿ ಆತ್ಮಹತ್ಯೆಯ ನಿರ್ಧಾರ ಮಾಡಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net