

ಶಿರಹಟ್ಟಿ: ಹಾಜರಾತಿಗಷ್ಟೇ ಸಭೆಗೆ ಬರುವುದಾಗಲಿ, ಇಲ್ಲವೇ ಕಚೇರಿ ಸಿಬ್ಬಂದಿಯನ್ನು ಕಳಿಸುವ ಪರಿಪಾಠ ಬೇಡ. ಪ್ರತಿ ಇಲಾಖೆಯ ಅಧಿಕಾರಿಗಳು ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಬರಬೇಕು ಎಂದು ತಾಪಂ ಆಡಳಿತಾಧಿಕಾರಿ ಎ.ಎ. ಕಂಬಾಳಿಮಠ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ತಾಪಂ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಸೆ. 2ರಂದು ನಡೆಸಿದ್ದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆಲ ಅಧಿಕಾರಿಗಳ ಸೂಕ್ತ ಮಾಹಿತಿಯೊಂದಿಗೆ ಬಂದಿರಲಿಲ್ಲ. ಆಗ ಸಚಿವರು ಕೂಡ ಅಂಥ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಅಧಿಕಾರಿಗಳು ಆ ತಪ್ಪನ್ನು ಪದೇ ಪದೆ ಮಾಡಬಾರದು ಎಂದರು.
ತಾಲೂಕು ಕೃಷಿ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನಲ್ಲಿ 32 ಸಾವಿರ ಹೆಕ್ಟೇರ್ ಸಾಗುವಳಿ ಪ್ರದೇಶವಿದೆ. ತೋಟಗಾರಿಕೆ ಬೆಳೆ ಸೇರಿ 28 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ಹಾನಿ ಸಮೀಕ್ಷೆ ಮಾಡಲಾಗಿದ್ದು, ಅದರಿಂದ ಅಂದಾಜು 186 ಕೋಟಿ ರೂ. ಬೆಳೆ ಹಾನಿಯಾಗಿದೆ ಎಂದು ವರದಿ ಸಲ್ಲಿಸಲಾಗಿದೆ. ಅಧಿಕಾರಿಗಳು ಸಮಸ್ಯೆಯ ಗಂಭೀರತೆ ತಿಳಿದು ಹಳ್ಳಿಗಳಲ್ಲಿ ಕುಡಿಯುವ ನೀರಿನ ಅಭಾವ ಆಗದಂತೆ ಹಾಗೂ ಜಾನುವಾರುಳಿಗೆ ಮೇವಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕಂಬಾಳಿಮಠ ತಾಕೀತು ಮಾಡಿದರು.
ಶಿಕ್ಷಣ, ಕಂದಾಯ, ಕೃಷಿ, ಪಿಡಬ್ಲುೃಡಿ, ಸಾರಿಗೆ, ಪಿಆರ್‌ಇಡಿ ಸೇರಿ ಉಳಿದ ಇಲಾಖೆ ಕಚೇರಿಗಳಲ್ಲಿ ಅ. 2ರೊಳಗೆ ಬಯೋಮೆಟ್ರಿಕ್ ಪದ್ಧತಿ ಅಳವಡಿಸಿಕೊಳ್ಳಲು ನಿರ್ದೇಶನ ನೀಡಿ 20 ದಿನಗಳಾಗಿವೆ. ಈವರೆಗೆ ಕೆಲವರು ಅನುಷ್ಠಾನಗೊಳಿಸಿಲ್ಲ. ತಮ್ಮ ಇಲಾಖೆಯಲ್ಲಿ ಲಭ್ಯವಿರುವ ಕಾಂಟೇಜೆನ್ಸಿ ಹಣ ಬಳಸಿ ಶೀಘ್ರದಲ್ಲಿ ಬಯೋಮೆಟ್ರಿಕ್ ಅಳವಡಿಸಿ ಮಾಹಿತಿ ನೀಡಬೇಕು ಎಂದು ಆಡಳಿತಾಧಿಕಾರಿ ಸೂಚಿಸಿದರು.
ಮಜ್ಜೂರ ಕೆರೆ ತುಂಬಿಸುವ ಯೋಜನೆ ಮಾಹಿತಿ ನೀಡಲು ಸಣ್ಣ ನೀರಾವರಿ ಇಲಾಖೆ ಗುಮಾಸ್ತ ವಿಶ್ವನಾಥ ಪೂಜಾರ ತಡವರಿಸಿದರು. ಆಗ ಸಹನೆ ಕಳೆದುಕೊಂಡ ಕಂಬಾಳಿಮಠ, ನೀವು ಹಾಜರಾತಿಗೆ ಸಹಿ ಮಾಡಲು ಬಂದಂತಿದೆ. ಮುಂದಿನ ಸಭೆಗೆ ನಿಮ್ಮ ಹಿರಿಯ ಅಧಿಕಾರಿ ಬರಬೇಕು ಎಂದು ಸೂಚನೆ ನೀಡಿದರು. ಜಿಲ್ಲಾ ಮಟ್ಟದ ಅಧಿಕಾರಿಗಳ ಗೈರಿನ ಕುರಿತು ತಾಪಂ ಇಒ ಡಾ. ಓಲೇಕಾರ ಸಭೆಯ ಗಮನಕ್ಕ ಎ ತಂದರು. ಆಗ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನೋಟಿಸ್ ನೀಡಬೇಕು ಎಂದು ಕಂಬಾಳಿಮಠ ಸಲಹೆ ನೀಡಿದರು.
ಸಾರಿಗೆ, ಸಾಮಾಜಿಕ ಅರಣ್ಯ ಇಲಾಖೆ, ಅಂಬೇಡ್ಕರ್ ಅಭಿವೃದ್ದಿ ನಿಗಮ, ಸಾಮಾಜಿಕ, ಹಿಂದುಳಿಕ ಕಲ್ಯಾಣ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಗಳ ಮೇಲೆ ಚರ್ಚೆ ನಡೆಯಿತು. ತಾಪಂ ಇಒ ಡಾ. ಎನ್.ಎಚ್. ಓಲೇಕಾರ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಎಸ್.ಬಿ. ಕುಲಕರ್ಣಿ ಇತರರು ಇದ್ದರು.