

ಶಿರಹಟ್ಟಿ: ಶಿರಹಟ್ಟಿ ಫಕೀರೇಶ್ವರ ಸಂಸ್ಥಾನಮಠದ ಜಾತ್ರಾ ಮಹೋತ್ಸವ ಬೌದ್ಧ ಪೌರ್ಣಿಮೆ ದಿನ ಮೇ ೫ರಿಂದ ೭ರವರೆಗೆ ಜರುಗಲಿದೆ. ಶ್ರೀಮಠದಲ್ಲಿ ಸಂಭ್ರಮ ಸಡಗರ ಕಳೆಗಟ್ಟಿದೆ.
೧೬ನೇ ಶತಮಾನದಲ್ಲಿ ವಿಜಯಪುರದ ವೀರಶೈವ ಧರ್ಮ ಪರಂಪರೆಯ ಶಿವಯ್ಯ-ಗೌರಮ್ಮ ದಂಪತಿಯ ಉದರದಲ್ಲಿ ಸೂಫಿಸಂತ ಖಾಜಾ ಅಮಿನುದ್ದಿನ್ ಅವರ ಅನುಗ್ರಹದಿಂದ ಜನಿಸಿದ ಮೊದಲ ಮಗು ಚನ್ನವೀರಯ್ಯ ಖಾಜಾ ಅಮೀನರ ಅಧ್ಯಾತ್ಮದ ಗರಡಿಯಲ್ಲಿ ಪಳಗಿ ಹಿಂದು-ಮುಸ್ಲಿಂ ಧರ್ಮ ಸಿದ್ದಾಂತಗಳನ್ನು ಮನನ ಮಾಡಿಕೊಂಡು ಖಾಜಾ ಅಮೀನರ ಅಣತಿಯಂತೆ ಶ್ರೀ ಫಕೀರ ಚನ್ನವೀರ ಶಿವಯೋಗಿಯಾಗಿ ಲೋಕ ಕಲ್ಯಾಣಾರ್ಥ ಸಂಚಾರ ಕೈಗೊಂಡರು.
ಜಾತಿ, ಧರ್ಮದ ಹೆಸರಿನಲ್ಲಿ ಬಡಿದಾಡುವ ಜನರಿಗೆ ದ್ವೇಷ ಬಿಡು, ಪ್ರೀತಿ ಮಾಡು ಎಂಬ ತತ್ವಬೋಧನೆ ಮಾಡುತ್ತ ದೇಶ ಸಂಚಾರ ಕೈಗೊಂಡು ಕೊನೆಗೆ ಶಿರಹಟ್ಟಿಗೆ ಆಗಮಿಸಿ ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡರು.
ಹಿಂದು-ಮುಸ್ಲಿಂ ಸಾಮರಸ್ಯದ ಪ್ರತೀಕವಾಗಿ ಮಠದ ಗೋಪುರಗಳಲ್ಲಿ ಹಸಿರು, ಕೇಸರಿ ಧ್ವಜಗಳು ರಾರಾಜಿಸುತ್ತವೆ. ಮಸೀದಿಯಲ್ಲಿ ನಿತ್ಯ ನಗಾರಿ, ಟಿಕೊರಿ, ತಾಳ, ಕರಣಿ, ಸನಾದಿ ಪಂಚವಾದ್ಯಗಳ ನಿನಾದ ಕೇಳುತ್ತವೆ.
ಪೀಠಾಧಿಪತಿ ಜಗದ್ಗುರುಗಳ ವಸ್ತ್ರ ಮತ್ತು ಆಭರಣಗಳು ಉಭಯ ಧರ್ಮದ ಶೈಯಲ್ಲಿವೆ.
ಮಠದ ಜಾತ್ರೆಯ ಸಂದರ್ಭದಲ್ಲಿ ಮೈಸೂರು ಮಹಾರಾಜರು ಕಾಣಿಕೆಯಾಗಿ ನೀಡಿದ ಶಿರಪೇಚು, ಪೋಚಿ, ರತ್ನದ ಹಾರ, ದಿಲ್ಲಿ ಬಾದಶಹ ನೀಡಿದ ಕಠಾರಿ, ರಣಬಿಲ್ಲೆ, ಶಲ್ಯ, ಸಿಕ್ಕೆಗಳನ್ನು ಶ್ರೀಗಳು ಧರಿಸುತ್ತಾರೆ. ಹಾಗೆಯೇ ಆನೆ, ಒಂಟೆ, ಕುದುರೆಗಳು ಮಠಕ್ಕೆ ಮೆರುಗು ನೀಡುತ್ತಿವೆ.
ಶಿರಹಟ್ಟಿ ಸಂಸ್ಥಾನಮಠದ ಪರಂಪರೆಯಲ್ಲಿ ಈವರೆಗೆ ೧೨ ಪೀಠಾಧಿಪತಿಗಳು ಆಗಿ ಹೋಗಿದ್ದಾರೆ. ಸದ್ಯ ೧೩ನೇ ಪೀಠಾಧಿಪತಿ ಜ. ಫಕೀರಸಿದ್ಧರಾಮ ಶ್ರೀಗಳು ಮಠದಲ್ಲಿ ಅನೇಕ ಜೀರ್ಣೋದ್ದಾರ ಕಾರ್ಯಗಳನ್ನು ಕೈಗೊಂಡಿದ್ದಾರೆ.
ಶ್ರೀಮಠವು ಉತ್ತರ ಕರ್ನಾಟಕ ಭಾಗದ ವಿವಿಧೆಡೆ ೬೦ಕ್ಕೂ ಹೆಚ್ಚು ಶಾಖಾ ಮಂದಿರಗಳು ಹಾಗೂ ೮ ಶಾಖಾ ಮಸೀದಿಗಳನ್ನು ಹೊಂದಿದೆ. ಸಂಸ್ಥಾನಮಠದಿಂದ ಐದು ಪ್ರೌಢಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ.
ಶ್ರೀಮಠದ ನೂತನ ಪೀಠಾಧಿಪತಿ ಫಕೀರ ದಿಂಗಾಲೇಶ್ವರ ಸ್ವಾಮೀಜಿಯವರು ಮಠದ ಪರಂಪರೆಯಂತೆ ತ್ರಿವಿಧ ದಾಸೋಹದ ಮೂಲಕ ಭಕ್ತೋದ್ಧಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ವಿದ್ಯಾಪ್ರಸಾರಕ್ಕೆ ಮಹತ್ವ ನೀಡಿದ್ದು, ಶಿಕ್ಷಣ ಸಂಸ್ಥೆ ಮತ್ತು ಶಿರಹಟ್ಟಿಯಲ್ಲಿ ಆಯುರ್ವೇದ ಕಾಲೇಜ್ ಆರಂಭಕ್ಕೆ ಸಿದ್ಧತೆ ನಡೆಸಿದ್ದಾರೆ.
ಶಿರಹಟ್ಟಿ ಫಕೀರೇಶ್ವರ ಸಂಸ್ಥಾನಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಮೇ ೫ರಂದು ಬೆಳಗ್ಗೆ ೧೦ ಗಂಟೆಗೆ ಪೀಠಾಧಿಪತಿ ಶ್ರೀ ಫಕೀರಸಿದ್ಧರಾಮ ಶ್ರೀಗಳ ಪುರ ಪ್ರವೇಶದೊಂದಿಗೆ ಪಲ್ಲಕ್ಕಿ ಉತ್ಸವ, ಸಂಜೆ ೫ಕ್ಕೆ ಮಹಾರಥೋತ್ಸವ ಹಾಗೂ ೬ರಂದು ಸಂಜೆ ೫ಕ್ಕೆ ಕಡುಬಿನ ಕಾಳಗ, ೭ರಂದು ವಿವಿಧ ಕಲಾವಿದರಿಂದ ಭಕ್ತಿ ಸಂಗೀತ ಕಾರ್ಯಕ್ರಮದ ಜತೆಗೆ ಧರ್ಮಸಭೆ, ಶ್ರೀಗಳ ತುಲಾಭಾರ ನಡೆಯಲಿದೆ.