

ಶಿರಹಟ್ಟಿ: ಹೊಲದಲ್ಲಿ ತುಂಡರಿಸಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಕೃಷಿ ಕಾರ್ವಿುಕ ಹಾಗೂ ಆಕಳು ಮೃತಪಟ್ಟ ಘಟನೆ ತಾಲೂಕಿನ ಛಬ್ಬಿ ಗ್ರಾಮದ ನಾದಿಗಟ್ಟಿ ರಸ್ತೆ ಪಕ್ಕದ ಹಾಳು ಜಮೀನಿನಲ್ಲಿ ಭಾನುವಾರ ಸಂಭವಿಸಿದೆ.
ಛಬ್ಬಿ ಗ್ರಾಮದ ಪುರಪ್ಪ ಪೂಮಪ್ಪ ಲಮಾಣಿ (62 ) ಮೃತಪಟ್ಟ ಕೂಲಿ ಕಾರ್ವಿುಕ. ಮೃತ ಪುರಪ್ಪ ಅವರು ಆಕಳು ಮೇಯಿಸಲು ಮಧ್ಯಾಹ್ನ ಜಮೀನಿಗೆ ತೆರಳಿದ್ದರು. ಜಮೀನಿನಲ್ಲಿ ಹೈಟೆನ್ಶನ್ ವಿದ್ಯುತ್ ತಂತಿ ತುಂಡರಿಸಿ ಬಿದ್ದಿತ್ತು. ಆಕಳು ಆ ತಂತಿಯನ್ನು ರ್ಸ³ಸಿ ಒದ್ದಾಡುದೆ. ಆಗ ಆಕಳಿಗೆ ತಗುಲಿದ ತಂತಿಯನ್ನು ಪುರಪ್ಪ ಲಮಾಣಿ ಅವರು ಬಿಡಿಸಲು ಮುಂದಾಗಿದ್ದಾರೆ. ಅವರಿಗೂ ವಿದ್ಯುತ್ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಅಕ್ಕಪಕ್ಕದ ಜಮೀನಿನಲ್ಲಿದ್ದವರು ತಿಳಿಸಿದ್ದಾರೆ. ಮೃತ ಪುರಪ್ಪನ ಕೂಗಾಟ ಕೇಳುತ್ತಿದ್ದಂತೆ ಹತ್ತಿರದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಬಂದು ನೋಡಿದ್ದಾರೆ. ತಕ್ಷಣ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಶಿರಹಟ್ಟಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಸ್ಕಾಂ ವಿರುದ್ಧ ಆಕ್ರೋಶ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಬೇಗ ತೆರವುಗೊಳಿಸಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಿರ್ಲಕ್ಷ್ಯ ವಹಿಸಿದ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.