

ಶಿರಹಟ್ಟಿ: ಶ್ರೀ ಫಕೀರೇಶ್ವರರು ನಡೆದಾಡಿದ ಈ ಪುಣ್ಯದ ನಾಡಿನಲ್ಲಿ ವಿವಿಧತೆಯಲ್ಲಿ ಏಕತೆ ಕಾಪಾಡುವ ನಿಟ್ಟಿನಲ್ಲಿ ಬನ್ನಿಕೊಪ್ಪ ಗ್ರಾಮಸ್ಥರು ವಂತಿಗೆ ಮೂಲಕ 2 ಲಕ್ಷ ರೂ. ಸೇರಿಸಿ 10 ಪಾಂಜಾಗಳನ್ನು ನಿರ್ಮಿಸಿ ಮೊಹರಂ ಆಚರಣೆಗೆ ಮುಂದಾಗಿರುವುದು ಹೆಮ್ಮೆಯ ಸಂಗತಿ ಎಂದು ಶಿರಹಟ್ಟಿ ಸಂಸ್ಥಾನಮಠದ ಶ್ರೀ ಫಕೀರ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀಮಠಕ್ಕೆ ಸೋಮವಾರ ಹೊಸ ಪಾಂಜಾಗಳೊಂದಿಗೆ ಬಂದಿದ್ದ ಬನ್ನಿಕೊಪ್ಪ ಗ್ರಾಮದ ಹಿಂದು-ಮುಸ್ಲಿಂ ಭಕ್ತರನ್ನು ಆಶೀರ್ವದಿಸಿ ಶ್ರೀಗಳು ಮಾತನಾಡಿದರು. ಹಿಂದು-ಮುಸ್ಲಿಮರಲ್ಲಿ ಸಮನ್ವಯದ ಭಾವ ಬಿತ್ತುವ ಜತೆಗೆ ಸಂಬಂಧಗಳನ್ನು ವೃದ್ಧಿಸುವಲ್ಲಿ ಈ ಕಾರ್ಯ ಇತರರಿಗೂ ಮಾದರಿಯಾಗಿದೆ. ಇಂಥ ಭಾವೈಕ್ಯದ ಪರಂಪರೆಗೆ ನಾಂದಿ ಹಾಡಿದ ಗ್ರಾಮಸ್ಥರಿಗೆ ಶ್ರೀ ಫಕೀರೇಶ್ವರ ಸುಖ, ಶಾಂತಿ ನೀಡಿ ಕಾಪಾಡಲಿ, ಗ್ರಾಮದಲ್ಲಿ ಸದಾ ಸುಭೀಕ್ಷೆ ನೆಲೆಸಲಿ ಎಂದು ಹಾರೈಸಿದರು.
ಅಣ್ಣಪ್ಪ ಕುಸ್ತಿ, ಫಕ್ರುಸಾಬ್ ನದಾಫ್, ಪ್ರವೀಣ ಕಾಲವಾಡ, ಹಾಲೇಶ ತಳವಾರ, ಅಲ್ಲಾಬಕ್ಷ ನದಾಫ್, ಹುಸೇಬಸಾಬ್ ನದಾಫ್, ದೇವಪ್ಪ ಬಡಮ್ಮನವರ, ಹೊನ್ನಪ್ಪ ಕುಸ್ತಿ, ಸತೀಶ ವಡ್ಡಟ್ಟಿ, ಕೆಂಚಪ್ಪ ಭೋವಿ, ನಾಗಪ್ಪ ಕಟ್ಟಿಮನಿ, ರಾಜಾಬಕ್ಷಿ ಚಿಂಚಲಿ, ನೀಲಪ್ಪ ಕಳಸಾಪೂರ, ಭೀಮಪ್ಪ ಬಡೆಮ್ಮನವರ, ಹನುಮಂತ ಕುಸ್ತಿ, ದಾವಲಸಾಬ್ ನದಾಫ್, ಚಂದ್ರು ಹಳ್ಳೆಪ್ಪನವರ, ರಜಾಕಸಾಬ್ ದೊಡ್ಡಮನಿ, ನಿಂಗಪ್ಪ ಗುಡ್ಡದವರ ಇತರರು ಇದ್ದರು.
ಹಿತ್ತಾಳೆ ನಿರ್ಮಿತ ಮೌಲಾಲಿ, ಬೀಬಿ ಫಾತೀಮಾ, ಹಸೇನ- ಹುಸೇನ್, ಚಾಂದವಲಿ, ದಾವಲ್‌ಮಲಿಕ್, ಹಜರತ ಖಾದರಶಾ, ಆಸ್ಕರಅಲಿ, ಚಂದ್ರಾಕಾರದ ದೇವರ ಪಾಂಜಾಗಳನ್ನು ಸಿದ್ಧಪಡಿಸಲಾಗಿದೆ.