

ಶಿರಹಟ್ಟಿ: ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ಸದನದಲ್ಲಿ ನೀಡಿದ್ದ ಹೇಳಿಕೆ ಖಂಡಿಸಿ ಗುರುವಾರ ಕರೆ ನೀಡಿದ್ದ ಶಿರಹಟ್ಟಿ ಸಂಪೂರ್ಣ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಯಿತು.
ರಾಷ್ಟ್ರೀಯ ಅಹಿಂದ ಒಕ್ಕೂಟ, ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್, ಕನ್ನಡಪರ, ಮುಸ್ಲಿಂ, ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ವತಿಯಿಂದ ಬಂದ್‌ಗೆ ಕರೆ ನೀಡಲಾಗಿತ್ತು. ಜ.ಫಕೀರೇಶ್ವರ ಶ್ರೀ ಮಠದಿಂದ ಪಾದಯಾತ್ರೆ ಮೂಲಕ ವಿವಿಧ ಸಂಘಟನೆಗಳವರು ಪ್ರತಿಭಟನಾ ಮೆರವಣಿಗೆ ನಡೆಸಿದರು. ನೆಹರು ಸರ್ಕಲ್‌ನಲ್ಲಿ ಒಂದು ಸಾವಿರ ಜನರು ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ಬಂದ್ ಮಾಡಿ, ಸರಕು ಸಾಗಣೆ ವಾಹನಗಳನ್ನು ತಡೆದರು. ಮಾರುಕಟ್ಟೆಯಲ್ಲಿ ಅಂಗಡಿಗಳನ್ನು ಬಂದ್ ಮಾಡಿ ವ್ಯಾಪಾರಿಗಳು ಬೆಂಬಲ ವ್ಯಕ್ತಪಡಿಸಿದರು. ಔಷಧ ಮತ್ತು ಹಾಲಿನ ಕೇಂದ್ರ ಹೊರತುಪಡಿಸಿದ ಉಳಿದೆಲ್ಲ ಅಂಗಡಿ, ಹೋಟೆಲ್‌ಗಳು ಮುಚ್ಚಿದ್ದವು. ವಿವಿಧ ಸಂಘಟನೆಗಳ ಮುಖಂಡರು ಅಮಿತ್ ಷಾ ಅವರ ಪ್ರತಿಕೃತಿ ದಹನ ಮಾಡಿ, ಬಿಜೆಪಿ ವಿರುದ್ಧ ಪ್ರತಿಭಟನೆ ಕೂಗುತ್ತಾ ಪಾದಯಾತ್ರೆ ತಹಸೀಲ್ದಾರ್ ಕಚೇರಿ ವರೆಗೆ ಸಾಗಿದರು.
ತಹಸೀಲ್ದಾರ್ ವಾಸುದೇವ ಮುರಗಿ ಅವರಿಗೆ ಮನವಿ ಸಲ್ಲಿಸಿ ಮಾತಾನಾಡಿಈ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಅಂಬೇಡ್ಕರ್ ಭಾರತೀಯ ಸಂವಿಧಾನದ ವಾಸ್ತುಶಿಲ್ಪಿ. ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಚಾಂಪಿಯನ್. ಅಮಿತ್ ಷಾ ಅವರು, ಅಂಬೇಡ್ಕರ್ ಕುರಿತು ಲಘುವಾಗಿ ಮಾತನಾಡಿದ್ದಾರೆ. ಅಂಬೇಡ್ಕರ್ ರಾಷ್ಟ್ರ ನಿರ್ಮಾಣಕ್ಕೆ ಅಪ್ರತಿಮ ಕೊಡುಗೆಗಳನ್ನು ನೀಡಿದ್ದಾರೆ. ತಳಸಮುದಾಯಗಳ ಹಕ್ಕುಗಳಿಗಾಗಿ ಅವಿರತವಾದ ಹೋರಾಟ ಮಾಡಿದ್ದಾರೆ. ಷಾ ಅವರ ಹೇಳಿಕೆಯಿಂದ ಅಂಬೇಡ್ಕರ್ ಅವರಿಗೆ ಅವಮಾನಿಸಿದಂತಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಸಂವಿಧಾನವು ಜಾತಿ, ಧರ್ಮ ಅಥವಾ ಲಿಂಗವನ್ನು ಲೆಕ್ಕಿಸದೆ ಎಲ್ಲರಿಗೂ ಸಮಾನ ಹಕ್ಕುಗಳನ್ನು ಖಾತರಿಪಡಿಸಿದೆ. ಆ ಪರಂಪರೆಯನ್ನು ಹಾಳುಮಾಡುವ ಯಾವುದೇ ಪ್ರಯತ್ನವು ಅವರ ಸ್ಮರಣೆಗೆ ಮಾತ್ರವಲ್ಲ, ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೂಲ ಮೌಲ್ಯಗಳಿಗೂ ಅವಮಾನ ಮಾಡಿದಂತೆ ಎಂದು ದೂರಿದರು.
ಮಾಜಿ ಶಾಸಕ ರಾಮಣ್ಣ ಲಮಾಣಿ ಮಾತಾನಾಡಿ, ಷಾ ಅವರು ತಮ್ಮ ಹೇಳಿಕೆ ಬಗ್ಗೆ ಸಾರ್ವಜನಿಕವಾಗಿ ಕ್ಷಮೆಯಾಚನೆ ನೀಡಬೇಕು. ಡಾ. ಅಂಬೇಡ್ಕರ್ ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ಎತ್ತಿಹಿಡಿಯಲು ಸರ್ಕಾರ ಬದ್ಧತೆಯನ್ನು ಪುನರುಚ್ಚರಿಸಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಸಾರ್ವಜನಿಕ ಅಧಿಕಾರಿಗಳು ಮತ್ತು ಸಾರ್ವಜನಿಕರಲ್ಲಿ ಡಾ. ಅಂಬೇಡ್ಕರ್ ಅವರ ಕೊಡುಗೆಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪಟ್ಟಣದ ವರ್ತಕರು ಸಂಘಟನೆ, ದಲಿತ ಸಂಘಷರ್ ಸಮಿತಿ, ಕನ್ನಡ ರಕ್ಷಣಾ ವೇದಿಕೆಯ ವಿವಿಧ ಬಣಗಳು, ಬೀದಿಬದಿಯ ವ್ಯಾಪಾರಸ್ಥ ಸಂಘಟನೆ, ಶಿರಹಟ್ಟಿ ಜೈ ಭೀಮ್ ಸಂಘಟನೆ, ಡಾ. ಬಿ.ಆರ್.ಅಂಬೇಡ್ಕರ್ ಅಭಿಮಾನಿ ಬಳಗ, ಭೂಸಂಪತ್ತು ಮತ್ತು ಸಂರಕ್ಷಣಾ ಸಮಿತಿ, ಶಿರಹಟ್ಟಿ ಮುಸ್ಲಿಂ ಅಂಜುಮನ್ ಸಮಿತಿ ಹಾಗೂ ವಿವಿಧ ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು. ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ, ಮುತ್ತಣ್ಣ ಬಾವಿಮನಿ, ಮಹಾಂತೇಶ ದಶಮನಿ, ಮೆಹಬೂಬಸಾಬ್ ಲಕ್ಷ್ಮೇಶ್ವರ, ಮಂಜುನಾಥ್ ಘಂಟೆ, ಡಿ.ಕೆ. ಹೊನ್ನಪ್ಪನವರ, ದೇವಪ್ಪ ಲಮಾಣಿ, ಹನುಮಂತ ಗೊಜನೂರ, ಆನಂದ ಕೋಳಿ,ಬುಡನಶಾ ಮಕನದಾರ, ವಿವಿಧ ಸಂಘಟನೆಗಳ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಇದ್ದರು.