

ಕಾಗವಾಡ: ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ರೈತರಿಗೆ ಬರ ಪರಿಹಾರ ನೀಡುವಲ್ಲಿ ಅನೇಕ ಲೋಪಗಳಾಗಿದ್ದು, ರೊಚ್ಚಿಗೆದ್ದ ರೈತರು ಮಂಗಳವಾರ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು.
ಗ್ರಾಮದಲ್ಲಿ ಸಾವಿರಕ್ಕೂ ಅಧಿಕರ ರೈತರಿದ್ದು, ಕೇವಲ ಶೇ. 10 ರೈತರಿಗೆ ಮಾತ್ರ ಬರ ಪರಿಹಾರ ಬಂದಿದೆ. ಉಳಿದ ಶೇ. 90 ರೈತರಿಗೆ ಬರ ಪರಿಹಾರ ದೊರೆತಿಲ್ಲ. ಈ ಕುರಿತು ಗ್ರಾಮ ಲೆಕ್ಕಾಧಿಕಾರಿಯನ್ನು ರೈತರು ವಿಚಾರಿಸಿದಾಗ ಹಾರಿಕೆ ಉತ್ತರ ನೀಡುತ್ತಿದ್ದಾರೆಂದು ರೈತರು ಆಕ್ರೋಶಗೊಂಡರು. ಹಿರಿಯ ಅಧಿಕಾರಿಗಳು ಆಗಮಿಸಿ, ಲೋಪ ಸರಿಪಡಿಸಿ ಎಲ್ಲ ರೈತರಿಗೆ ಬರ ಪರಿಹಾರ ದೊರೆಯುವಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.
ಸ್ಥಳಕ್ಕೆ ಯಾವುದೇ ಹಿರಿಯ ಅಧಿಕಾರಿಗಳು ಭೇಟಿ ನೀಡದ್ದರಿಂದ ರೈತರು ತಾಲೂಕಾಡಳಿತದ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ತಪ್ಪಿನಿಂದಾಗಿ ಆಗಿರುವ ಲೋಪ ಸರಿಪಡಿಸಿ ಬರ ಪರಿಹಾರ ನೀಡಿ, ಇಲ್ಲದೆ ಹೋದಲ್ಲಿ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಬಾಗಿಲು ತೆರೆಯಲು ಬಿಡುವುದಿಲ್ಲವೆಂದು ರೈತರು ಎಚ್ಚರಿಸಿದ್ದಾರೆ.
ರೈತ ಮುಖಂಡರಾದ ವಿಜಯ ಅಕಿವಾಟೆ, ಭೀಮು ಭೋಲೆ, ಅಜಿತ ಕಾಗವಾಡೆ, ಪ್ರಲ್ಹಾದ ಪಾಟೀಲ, ಅಪ್ಪಾಸಾಬ ಚೌಗುಲೆ, ಗಣೇಶ ಪಾಟೀಲ, ಅಕ್ಷಯ ಪಾಟೀಲ, ದೀಪಕ ಮಾಂಗೂರೆ, ಅಜಿತ ತುಪಳೆ, ಅಭಿನಂದನ ಚೌಗುಲೆ ಇತರರಿದ್ದರು.