

ಬೆಂಗಳೂರು- ಮಂಗಳೂರು ಸಂಪರ್ಕಿಸುವ ಸಮೀಪದ ಶಿರಾಡಿ ಮಾರ್ಗ ನಡುವೆ ಭೂಕುಸಿತ ಪ್ರದೇಶದ ಮಣ್ಣು ತೆರವು ಕಾಮಗಾರಿ ಪೂರ್ಣಗೊಂಡಿದ್ದು, ಈ ಮಾರ್ಗದಲ್ಲಿ ದಿನದ 24 ಗಂಟೆ ವಾಹನಗಳ ಸಂಚಾರಕ್ಕೆ ಅವಕಾಶ ಆರಂಭಿಸಲಾಗಿದೆ.
ಶನಿವಾರ ರಾತ್ರಿಯೇ ಕೆಲವು ವಾಹನಗಳಿಗೆ ಈ ಮಾರ್ಗ ಸಂಚರಿಸಲು ಅವಕಾಶ ಒದಗಿಸಲಾಗಿದ್ದು, ಭಾನುವಾರ ರಾತ್ರಿಯಿಂದ ಪೂರ್ಣ ಪ್ರಮಾಣದಲ್ಲಿ ಅವಕಾಶ ಒದಗಿಸಲಾಗುತ್ತಿದೆ ಎನ್ನುವ ಮಾಹಿತಿಯನ್ನು ಉನ್ನತ ಅಧಿಕಾರಿಗಳು ದೃಢಪಡಿಸಿದ್ದಾರೆ. ಆದರೆ ಈ ಕುರಿತು ಹಾಸನ ಜಿಲ್ಲಾಧಿಕಾರಿಯಿಂದ ಭಾನುವಾರ ಸಂಜೆಯ ತನಕ ಅಧಿಕೃತ ಆದೇಶ ಹೊರಬಿದ್ದಿಲ್ಲ.
ಭೂ ಕುಸಿತ ಸಂಭವಿಸಿದ ಬಳಿಕ ಈ ಮಾರ್ಗ ಶಿರಾಡಿ ಘಾಟಿ ಪ್ರದೇಶದಲ್ಲಿ ಬೆಳಗ್ಗೆ 6 ರಿಂದ ರಾತ್ರಿ 6 ತನಕ ಮಾತ್ರ ವಾಹನಗಳ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು. ರಾತ್ರಿ ಮಂಗಳೂರು ನಿಲ್ದಾಣದಿಂದ ಹೊರಟ ಬಸ್‌ಗಳು ಗುಂಡ್ಯ ಭಾಗದಲ್ಲಿ ಹಾಗೂ ಬೆಂಗಳೂರಿನಿಂದ ರಾತ್ರಿ ಹೊರಟ ಬಸ್ ಸಕಲೇಶಪುರದಲ್ಲಿ ಸುಮಾರು 2.30 ಗಂಟೆ ಕಾಯುವ ಪರಿಸ್ಥಿತಿ ಇತ್ತು. ಈ ಸಮಸ್ಯೆ ಸದ್ಯ ನಿವಾರಣೆಯಾಗಿದೆ.
ಮಂಗಳೂರು- ಬೆಳ್ತಂಗಡಿ- ಚಾರ್ಮಾಡಿ ಮಾರ್ಗ- ಹಾಸನ - ಬೆಂಗಳೂರು ಮಾರ್ಗ ದಿನದ 24 ಗಂಟೆ ಪ್ರಯಾಣಿಸಲು ಮೊದಲೇ ಅವಕಾಶವಿದ್ದರೂ, ಈ ಮಾರ್ಗ ದುರ್ಗಮವಾಗಿದೆ. ಕೆಎಸ್‌ಆರ್‌ಟಿಸಿ ರಾಜಹಂಸ, ಕರ್ನಾಟಕ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆ.
ಘಾಟಿ ಪ್ರದೇಶದ ರಸ್ತೆ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ ಕಾರಣ ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ಸಂಖ್ಯೆ ಶೇ.50 ರಷ್ಟು ಇಳಿಕೆಯಾಗಿದೆ. ಪ್ರೀಮಿಯಂ ಬಸ್‌ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಹಗಲು ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದೆ. ಈ ಅವಧಿಯಲ್ಲಿ ರೈಲು ಪ್ರಯಾಣಿಕರ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ನೈರುತ್ಯ ರೈಲ್ವೆ ಹಾಗೂ ಕೊಂಕಣ ರೈಲುಗಳು ಹೆಚ್ಚುವರಿ ಸ್ಪೆಷಲ್ ರೈಲುಗಳನ್ನು ಓಡಿಸುತ್ತಿವೆ.