

ತುಮಕೂರು: ಹಳದಿ ವಲಯದಲ್ಲಿ ಗುರುತಿಸಿಕೊಂಡು 4 ಕರೊನಾ ಸಕ್ರಿಯ ಪ್ರಕರಣಗಳಿರುವ ಹಿನ್ನೆಲೆಯಲ್ಲಿ ನಗರದ ಜನ ಆತಂಕದಿಂದ ದಿನದೂಡುವಂತಾಗಿದೆ.
ಕರೊನಾ ಸೋಂಕಿತರು ಪತ್ತೆಯಾಗಿರುವ ಪೂರ್‌ಹೌಸ್ ಕಾಲನಿ, ಕೆಎಚ್‌ಬಿ ಕಾಲನಿಯಲ್ಲಿ ಸಂಪೂರ್ಣ ಸೀಲ್‌ಡೌನ್ ಮುಂದುವರಿದಿದ್ದು, ಜನರ ಓಡಾಟಕ್ಕೆ ನಿರ್ಬಂಧವಿದೆ. ಜಿಲ್ಲೆಯಲ್ಲಿ ಮೊದಲೆರಡು ಕರೊನಾ ಸೋಂಕು ಪತ್ತೆಯಾಗಿದ್ದ ಶಿರಾ ನಗರದಲ್ಲಿ ಕಂಟೇನ್ಮೆಂಟ್‌ವಲಯವನ್ನು ಗುರುವಾರ ವಾಪಸ್ ಪಡೆಯಲಿದ್ದು, ನಗರದಲ್ಲಿ ಎಲ್ಲ ಆರ್ಥಿಕ ಚಟುವಟಿಕೆಗಳು ಆರಂಭವಾಗಲಿವೆ.
ಪಿ.84 ಸಂಪರ್ಕದಲ್ಲಿದ್ದವರೆಲ್ಲರ ಪರೀಕ್ಷೆ ನಡೆಸಲಾಗಿದ್ದು, ಅವರೆಲ್ಲರ ಸ್ಯಾಂಪಲ್‌ಗಳು ನೆಗೆಟಿವ್ ಬಂದಿರುವ ಹಿನ್ನೆಲೆಯಲ್ಲಿ ಶಿರಾ ನಗರದಲ್ಲಿಯೂ ವಹಿವಾಟು ನಡೆಸಲು ಅವಕಾಶ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ತುಮಕೂರು ನಗರದಲ್ಲಿ ಪಿ-591 ಹಾಗೂ ಪಿ-592 ಪ್ರಾಥಮಿಕ ಸಂಪರ್ಕದಲ್ಲಿದ್ದ 198 ಸ್ಯಾಂಪಲ್‌ಗಳು ಮಂಗಳವಾರ ನೆಗೆಟಿವ್ ಬಂದಿರುವುದರಿಂದ ನಗರವಾಸಿಗಳು ನೆಮ್ಮದಿಯಿಂದ ಇರುವಂತಾಗಿದೆ. ಮತ್ತಷ್ಟು ಸ್ಯಾಂಪಲ್‌ಗಳ ವರದಿ ಬರಬೇಕಿರುವ ಹಿನ್ನೆಲೆಯಲ್ಲಿ ತುಮಕೂರು ನಗರದಲ್ಲಿರುವ ಎರಡು ಕಂಟೈನ್‌ಮೆಂಟ್ ವಲಯಗಳಲ್ಲಿ ಯಾವುದೇ ಅಂಗಡಿಗಳು ತೆರೆಯಲು ಅವಕಾಶ ಇಲ್ಲ.
ಸೋಂಕಿತರಿಬ್ಬರು ಓಡಾಡಿರುವ ಜಯಪುರ, ಟಿಪ್ಪುನಗರ, ಹೆಗಡೆ ನಗರ, ಮರಳೂರುದಿಣ್ಣೆ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದ್ದು, ಜನರು ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಸ್ವಸ್ಥಾನಗಳಿಗೆ ವಾಪಸ್ ಕರೆತರುವ ಕೆಲಸ ಸೋಮವಾರ ಆರಂಭವಾಗಿದ್ದು, ಮೊದಲೆರಡು ದಿನ 743 ಜನರನ್ನು ಕರೆತರಲಾಗಿದೆ. ಬುಧವಾರ 420 ವಲಸೆ ಕಾರ್ಮಿಕರು ಗ್ರಾಮಗಳನ್ನು ಸೇರಿಕೊಂಡಿದ್ದಾರೆ. ಜಿಲ್ಲೆಯ ಬಹುತೇಕ ಭಾಗದಲ್ಲಿ ಬೆಳಗ್ಗೆ 6 ರಿಂದ ಮಧ್ಯಾಹ್ನ 1ರವರೆಗೆ ಎಲ್ಲ ದಿನಗಳಲ್ಲಿಯೂ ಎಲ್ಲ ರೀತಿಯ ಅಂಗಡಿಗಳಲ್ಲಿ ದೈಹಿಕ ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸಲು ಅವಕಾಶವಿದೆ. ತುಮಕೂರು ನಗರದಲ್ಲಿ ಮಾತ್ರ ಮುಕ್ತ ವ್ಯಾಪಾರಕ್ಕೆ ಕೆಲವು ನಿರ್ಬಂಧವಿದ್ದು, ಜನರು ಎಚ್ಚರಿಕೆಯಿಂದಲೇ ವ್ಯವಹಾರ ನಡೆಸಬೇಕಿದೆ. ಆದರೆ, ರಸ್ತೆಯಲ್ಲಿ ವಾಹನ ಸಂಚಾರ ದಿನೇದಿನೆ ಹೆಚ್ಚಾಗುತ್ತಿದೆ.
ಆರಂಭದಿಂದಲೂ ಶಿರಾ ನಗರದಲ್ಲಿದ್ದ ಕಂಟೈನ್ಮೆಂಟ್ ವಲಯವನ್ನು ಗುರುವಾರ ತೆರವುಗೊಳಿಸಲಾಗಿದ್ದು, ವ್ಯಾಪಾರ, ವಹಿವಾಟು ಆರಂಭಿಸಬಹುದು. ಎರಡು ಕಂಟೈನ್ಮೆಂಟ್ ವಲಯವಿರುವ ತುಮಕೂರಿನಲ್ಲಿ ವೈನ್‌ಶಾಪ್, ಅಂಗಡಿ ಆರಂಭದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ತೀರ್ಮಾನಿಸುತ್ತಾರೆ. ಡಾ.ಕೆ.ರಾಕೇಶ್‌ಕುಮಾರ್ ಜಿಲ್ಲಾಧಿಕಾರಿ