

ತುಮಕೂರು: ಶಿರಾ ಉಪಸಮರ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಅತಿರಥಮಹಾರಥರ ದಂಡೇ ಕ್ಷೇತ್ರದಾದ್ಯಂತ ಶುಕ್ರವಾರ ಅಬ್ಬರದ ಪ್ರಚಾರ ನಡೆಸಿತು.
ದಣಿವರಿಯದ ದಳಪತಿ: ವಾರದಿಂದ ಕ್ಷೇತ್ರದಲ್ಲೇ ಬೀಡುಬಿಟ್ಟಿರುವ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಶುಕ್ರವಾರವೂ ಬಿರುಸಿನ ಪ್ರಚಾರ ಮುಂದುವರಿಸಿದರು. ಶಿರಾ ನಗರದಲ್ಲಿ ಮುಸ್ಲಿಂ ಸಮುದಾಯದವರಿಗೆ ಈದ್ ಮಿಲಾದ್ ಶುಭಕೋರಿ ಅವರೊಂದಿಗೆ ಸಭೆ ನಡೆಸಿದರಲ್ಲದೆ, ಗೌಡನಗೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದರು. ಬಿಸಿಲು, ಧೂಳಿಗೆ ಕೊಂಚವೂ ದಣಿಯದ ದೇವೇಗೌಡರ ಉತ್ಸಾಹ ಯುವಕರನ್ನು ನಾಚಿಸುವಂತಿತ್ತು.
ಉಪಚುನಾವಣೆ ಮುಗಿದ ಬಳಿಕ ಶಿರಾ ತಾಲೂಕಿನಲ್ಲಿರುವ 65 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡದಿದ್ದರೆ, ಶಿರಾ ನಗರದಿಂದ ಬೆಂಗಳೂರಿನ ವಿಧಾನಸೌಧವರೆಗೆ ಪಾದಯಾತ್ರೆ ನಡೆಸುವುದಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಕ್ಷೇತ್ರದ ಸೋರೆಕುಂಟೆ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪರವಾಗಿ ಚುನಾವಣಾ ಪ್ರಚಾರ ನಡೆಸಿದರು.
ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರವಾಗಿ ಮಾಜಿ ಸಚಿವ ರಮಾನಾಥ್ರೈ, ಅಲ್ಲಂವೀರಭದ್ರಪ್ಪ, ಪ್ರಕಾಶ್ ರಾಥೋಡ್, ಕೆ.ಎನ್.ರಾಜಣ್ಣ ಸೇರಿದಂತೆ ಹಲವು ಮುಖಂಡರು ವಿವಿಧೆಡೆ ಪ್ರಚಾರ ನಡೆಸಿದರು.