ಮಂಗಳೂರು ತಲುಪಿದ ಹಡಗು ಸಿಬ್ಬಂದಿ, 40 ದಿನಗಳಿಂದ ಕಡಲಿನಲ್ಲಿ ಬಾಕಿಯಾಗಿದ್ದ 145 ಭಾರತೀಯರು

ship
Published on

ಪಡುಬಿದ್ರಿ: ಕರೊನಾ ಲಾಕ್‌ಡೌನ್‌ನಿಂದ ತೊಂದರೆಗೊಳಗಾಗಿ 40 ದಿನಗಳಿಂದ ಸಮುದ್ರದಲ್ಲಿಯೇ ಬಾಕಿಯಾಗಿದ್ದ ಇಂಗ್ಲೆಂಡ್‌ನ ಮರೆಲ್ಲಾ ಕ್ರೂಸೆಸ್ ಪ್ರವಾಸೋದ್ಯಮ ಸಂಸ್ಥೆಯ ಹಡಗಿನಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಮಂಗಳೂರಿನ ಇಬ್ಬರ ಸಹಿತ ರಾಜ್ಯದ 6 ಮಂದಿ ಶುಕ್ರವಾರ ಊರು ತಲುಪಿದ್ದಾರೆ.

ಜರ್ಮನ್‌ನ ಟುಯಿ ಕಂಪನಿಯ ಹಡಗಿನಲ್ಲಿ ಭಾರತದ 145 ಮಂದಿ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳ 600 ಮಂದಿ ಸಿಬ್ಬಂದಿ ಇದ್ದು, ಕರೊನಾ ಸೋಂಕು ನಿರ್ಬಂಧದಿಂದಾಗಿ ಬಂದರು ಸೇರಲಾಗದೆ ಮಾರ್ಚ್ 14ರಿಂದ ಸಮುದ್ರದಲ್ಲಿಯೇ ಸಿಲುಕಬೇಕಾಯಿತು. ಚೆನ್ನೈ, ಮಂಗಳೂರು, ಮುಂಬೈನಲ್ಲಿ ಬಂದರು ಪ್ರವೇಶಿಸಲು ಪ್ರಯತ್ನಿಸಿದರೂ ಅವಕಾಶ ನಿರಾಕರಿಸಲಾಗಿತ್ತು.

ಈ ಬಗ್ಗೆ ಹಡಗಿನಲ್ಲಿದ್ದ ಭಾರತೀಯರು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಡಿಯೋ ಟ್ವೀಟ್ ಮಾಡಿ ನೆರವು ಕೋರಿದ್ದರು. ಕೊನೆಗೂ ಏ.23ರಂದು ಮುಂಬೈ ಬಂದರಿನಲ್ಲಿ ಭಾರತೀಯ ಸಿಬ್ಬಂದಿಯನ್ನು ಇಳಿಸಲಾಯಿತು. ಎಲ್ಲ 145 ಭಾರತೀಯರನ್ನು ಕೋವಿಡ್ ತಪಾಸಣೆಗೊಳಪಡಿಸಿ, ಅಲ್ಲಿಂದ 5 ಬಸ್‌ಗಳ ಮೂಲಕ ಅಂಧೇರಿಯ 5 ಹೋಟೆಲ್‌ಗಳಿಗೆ ಕಳಿಸಿ 5 ದಿನ ಕ್ವಾರಂಟೈನ್ ಮಾಡಲಾಯಿತು. ಎಲ್ಲರ ವೈದ್ಯಕೀಯ ವರದಿ ನೆಗೆಟಿವ್ ಬಂದ ಬಳಿಕ ಏ.30ರಂದು ಅವರವರ ಊರುಗಳಿಗೆ ಬಸ್, ಕಾರ್‌ನಲ್ಲಿ ಕಳುಹಿಸಲಾಗಿದೆ.

ಮಂಗಳೂರು ಆಕಾಶಭವನದ ಲಿವಿಟ್ ಡಿಸೋಜ ಹಾಗೂ ಕೋಡಿಕಲ್‌ನ ಹರಿಪ್ರಸಾದ ರಾವ್ ಬಸ್ ಮೂಲಕ ಉಡುಪಿ ಜಿಲ್ಲಾ ಗಡಿ ದಾಟಿ ಶುಕ್ರವಾರ ಊರು ತಲುಪಿದ್ದು, ಮನೆಗೆ ತೆರಳದೆ ಇಬ್ಬರೂ ಕಾವೂರಿನ ಕೊಠಡಿಯಲ್ಲಿ ಕ್ವಾರಂಟೈನ್‌ಗೊಳಪಟ್ಟಿದ್ದಾರೆ. ಬೆಳಗಾವಿಯ ರಾಹುಲ್ ಹಾಗೂ ಸಂದೀಪ್, ಉತ್ತರ ಕನ್ನಡ ದಾಂಡೇಲಿಯ ಗ್ಲೋಬಿನ್, ಮೈಸೂರಿನ ವಿಜಯನಗರದ ರಕ್ಷಿತ್ ಈ ಹಡಗಿನಲ್ಲಿದ್ದ ರಾಜ್ಯದ ಇತರರಾಗಿದ್ದಾರೆ.

ಟೆಂಪರೇಚರ್ ತಂದ ಆತಂಕ: ಕೇರಳ, ತಮಿಳುನಾಡು, ಕರ್ನಾಟಕದ ಒಟ್ಟು 23 ಮಂದಿ ಬಸ್‌ನಲ್ಲಿ ಮುಂಬೈಯಿಂದ ಆಗಮಿಸಿದ್ದು, ದಕ್ಷಿಣ ಕನ್ನಡ ಜಿಲ್ಲಾ ಪ್ರವೇಶಿಸುವ ಹೆಜಮಾಡಿಯಲ್ಲಿ ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಿದರು. ಕರೊನಾ ಮಹಾಮಾರಿಯಿಂದ ತತ್ತರಿಸುತ್ತಿರುವ ಮುಂಬೈನಿಂದ ಬಂದ ಹಡಗು ಸಿಬ್ಬಂದಿಯ ದೇಹದ ಉಷ್ಣತೆ ಹೆಚ್ಚು ತೋರಿಸಿದ್ದರಿಂದ ಆತಂಕಕ್ಕೂ ಕಾರಣವಾಯಿತು. ಒಂದು ಗಂಟೆ ನಿಲ್ಲಿಸಿ ಮತ್ತೆ ತಪಾಸಣೆ ಮಾಡಿದಾಗ ಸರಿಯಾದ ಉಷ್ಣತೆ ತೋರಿಸಿದ ಬಳಿಕ ಅವರಿಗೆ ತೆರಳಲು ಅವಕಾಶ ಕಲ್ಪಿಸಲಾಯಿತು.

ಮುಂಬೈನಿಂದ ಸುಮಾರು 20 ಕಡೆ ತಪಾಸಣೆಗೊಳಪಟ್ಟಿದ್ದು, ಸುರಕ್ಷಿತವಾಗಿ ಊರು ಸೇರಿದ್ದೇವೆ. ಹಿರಿಯರು ಹಾಗೂ ಮಗು ಇರುವುದರಿಂದ ಅವರ ಆರೋಗ್ಯಕ್ಕೆ ಸಮಸ್ಯೆಯಾಗಬಾರದೆಂದು ಮನೆಗೆ ತೆರಳಿಲ್ಲ. ಕಾವೂರಿನ ಕೊಠಡಿಯೊಂದರಲ್ಲಿ ನಾವಿಬ್ಬರು ಕ್ವಾರಂಟೈನ್‌ಗೆ ಒಳಗಾಗಿದ್ದೇವೆ. ಸ್ಥಳೀಯ ಪೊಲೀಸ್ ಠಾಣೆಗೂ ಮಾಹಿತಿ ನೀಡಿದ್ದೇವೆ.

- ಹರಿಪ್ರಸಾದ ರಾವ್, ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net