ದೀಪಾವಳಿ ಹಬ್ಬಕ್ಕೆ ಬರುವಾಗ ರೈಲಿನಿಂದ ನದಿಗೆ ಬಿದ್ದವಳ ಮೃತದೇಹ ಪತ್ತೆ

IMG-20201113-WA0035_2
Published on

ಶಿವಮೊಗ್ಗ: ದೀಪಾವಳಿ ಹಬ್ಬಕ್ಕೆಂದು ಬರುವಾಗ ಆಕಸ್ಮಿಕವಾಗಿ ಕಾಲು ಜಾರಿ ತುಂಗಾ ನದಿಗೆ ಬಿದ್ದಿದ್ದ ಯುವತಿಯ ಮೃತದೇಹ 36 ಗಂಟೆಗಳ ಕಾರ್ಯಾಚರಣೆ ಬಳಿಕ ಶನಿವಾರ ಬೆಳಗ್ಗೆ ಪತ್ತೆಯಾಗಿದೆ. ಗಾಡಿಕೊಪ್ಪದ ಸಹನಾ(24) ಪತ್ತೆಯಾದ ಮೃತ ದೇಹ.

ಕಳೆದ ಗುರುವಾರ ರಾತ್ರಿ ಬೆಂಗಳೂರಿನಿಂದ ಜನಶತಾಬ್ದಿ ರೈಲಿನಲ್ಲಿ ಶಿವಮೊಗ್ಗಕ್ಕೆ ಬರುತ್ತಿದ್ದ ಆಯತಪ್ಪಿ ತುಂಗಾ ನದಿಗೆ ಬಿದ್ದಿದ್ದಳು.ಕೋಟೆ ಠಾಣೆ ಪೊಲೀಸರ ಸಹಕಾರದೊಂದಿಗೆ ಅಗ್ನಿಶಾಮಕ ದಳದ ಜಿಲ್ಲಾ ಅಧಿಕಾರಿ ಅಶೋಕ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ಸತತ 36 ಗಂಟೆ ಹಗಲಿರುಳು ಹುಡುಕಾಟ ನಡೆಸಿದ್ದರು. ಶನಿವಾರ ತುಂಗಾನದಿಯ ರೈಲ್ವೆ ಹಳಿ ಹಾಸುಪಾಸಿನಲ್ಲೇ ಯುವತಿ ಮೃತದೇಹ ದೊರೆತಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಪಾಲಕರಿಗೆ ಒಪ್ಪಿಸಿದರು.

ಸಿಎ ಪರೀಕ್ಷೆ ಬರೀಬೇಕಿತ್ತು: ಬೆಂಗಳೂರಿನಲ್ಲಿ ಎಂಸಿಎ ಓದುತ್ತಿದ್ದ ಸಹನಾ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇದೇ ನ.22ರಂದು ನಗರದ ಎನ್ ಇಎಸ್ ಕಾಲೇಜಿನಲ್ಲಿ ಸಿಎ(ಲೆಕ್ಕ ಪರಿಶೋಧಕ) ಪರೀಕ್ಷೆ ಬರೆಯಬೇಕಿತ್ತು. ಅದಕ್ಕೂ‌ಮೊದಲು ದೀಪಾವಳಿ ಇದ್ದ ಕಾರಣ ಗುರುವಾರ ಆಗಮಿಸುತ್ತಿದ್ದಳು. ತುಂಗಾ ನದಿ ಸೇತುವೆ ಮೇಲೆ ರೈಲು ಬರುವ ವೇಳೆ ಬಾಗಿಲ ಬಳಿ ನಿಂತು ಮೊಬೈಲ್ನ್ ನಲ್ಲಿ ಮಾತನಾಡುತ್ತಿದ್ದಳು. ಈ ವೇಳೆ ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಳು. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net