

ಶಿವಮೊಗ್ಗ: ಭಾವುಟಗಳನ್ನು ಹಿಡಿದು ಏರುದನಿಯಲ್ಲಿ ವಂದೇ ಮಾತರಂ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ, ಭಾರತ್ ಮಾತಾಕೀ ಜೈ ಎಂಬ ಘೋಷಣೆಯೊಂದಿಗೆ ಸಭಾಂಗಣದೊಳಕ್ಕೆಸ್ವಾತಂತ್ರ್ಯ ಹೋರಾಟಗಾರರ ಪಾತ್ರದೊಂದಿಗೆ ಪ್ರವೇಶಿಸಿದ ಕಲಾವಿದರು ನೆರೆದಿದ್ದವರ ಮೈನವಿರೇಳುವಂತೆ ಮಾಡಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕುವೆಂಪು ವಿವಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಈಸೂರ ಕೊಡೆವು ನಾಟಕ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿತು. ದೇಶದಲ್ಲಿಯೇ ಮೊದಲ ಸ್ವಾತಂತ್ರ್ಯ ಗ್ರಾಮ ಎಂದು ಘೋಷಿಸಿಕೊಂಡು ಹೆಸರುವಾಸಿಯಾಗಿದ್ದ ಶಿಕಾರಿಪುರದ ಈಸೂರು ಗ್ರಾಮದ ಸ್ವಾತಂತ್ರ ಹೋರಾಟ ನೆನೆಯುವ ಸಾಸ್ವೆಹಳ್ಳಿ ಸತೀಶ್ ರಚಿಸಿರುವ, ಶ್ರೀಪಾದ್ ತೀರ್ಥಹಳ್ಳಿ ನಿರ್ದೇಶನದ ಈ ನಾಟಕ ಅನೇಕ ಆಯಾಮಗಳಿಂದ ಗಮನಸೆಳೆಯಿತು.
ಪ್ರತಿದಿನ ಪಾಠ, ಪ್ರಯೋಗಾಲಯದ ಶೈಕ್ಷಣಿಕ ಚಟುವಟಿಕೆಗೆಳಲ್ಲಿ ತಲ್ಲೀನರಾಗಿರುತ್ತಿದ್ದ ವಿವಿಯ ವಿದ್ಯಾರ್ಥಿಗಳು ಇಂದು ಸ್ವಾತಂತ್ರ್ಯ ಹೋರಾಟದ ಕಥಾನಕವುಳ್ಳ ನಾಟಕ ವೀಕ್ಷಿಸಿ, ದೇಶದ ಪರ ಘೋಷಣೆಗಳನ್ನು ಕೂಗಿದರು.
ಬ್ರಿಟಿಷ್ ಸರ್ಕಾರಕ್ಕೆ ಕಂದಾಯ ಭರಿಸಲು ನಿರಾಕರಿಸಿ, ಶಾನುಭೋಗ ಮತ್ತು ಪಟೇಲರ ಕೈಯಿಂದ ಕಂದಾಯ ಪುಸ್ತಕವನ್ನು ಕಿತ್ತುಕೊಂಡು ಕಳಿಸುವ ಮೂಲಕ ಆರಂಭವಾಗುವ ಸಂಘರ್ಷ ಬ್ರಿಟಿಷ್ ಸರ್ಕಾರದ ಸೇನೆಯೊಡಗಿನ ಹೋರಾಟ, ದಬ್ಬಾಳಿಕೆ, ಅನ್ಯಾಯಗಳನ್ನು ಅನುಭವಿಸಿ ಕಡೆಗೆ ಸ್ವಾತಂತ್ರವೇ ಮುಖ್ಯ ಎಂದು ಗಲ್ಲಿಗೇರುವವರೆಗಿನ ಕಥಾನಕವನ್ನು ತೀರ್ಥಹಳ್ಳಿಯ ಪ್ರಥಮ ದರ್ಜೆ ಕಾಲೇಜು ಹಾಗೂ ತುಂಗಾ ಕಾಲೇಜಿನ ವಿದ್ಯಾರ್ಥಿಗಳು ಮನೋಜ್ಞವಾಗಿ ಅಭಿನಯಿಸಿದರು.
ಈಸೂರಿನ ಐವರು ವೀರರು ಗಲ್ಲಿಗೇರಿದ ನಂತರ ಮೊಳಗಿದ ವಂದೇಮಾತರಂ ಗೀತೆಗೆ ಸಭಿಕರು ಎದ್ದುನಿಂತು ಗೌರವಿಸಿದರು. ಇನ್ಸ್‌ಪೆಕ್ಟರ್ ಕೆಂಚೇಗೌಡ, ಲಂಗೋಜಿರಾವ್ ಹಾಗೂ ಗ್ರಾವಸ್ಥರ ಪಾತ್ರಗಳಲ್ಲಿ ವಿದ್ಯಾರ್ಥಿಗಳು ಪರಕಾಯ ಪ್ರವೇಶ ಮಾಡಿದವರಂತೆ ನಟಿಸಿದರು.