

ಶಿವಮೊಗ್ಗ: ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಅಮೆಚೂರ್ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ನಗರದ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರಾದ, ಅವಳಿ ಸಹೋದರಿಯರೂ ಆಗಿರುವ ಗೌತಮಿಗೌಡ, ಗೌರಂಗಿಗೌಡ ಹಾಗೂ 8ನೇ ತರಗತಿ ವಿದ್ಯಾರ್ಥಿ ನಿತಿನ್‌ಸಿಂಗ್ ಅತ್ಯುತ್ತಮ ಪ್ರದರ್ಶನ ನೀಡಿ ದಕ್ಷಿಣ ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
14 ವರ್ಷದೊಳಗಿನವರ ವಿಭಾಗದ ಉದ್ದ ಜಿಗಿತದಲ್ಲಿ ನಿತಿನ್‌ಸಿಂಗ್ 5.57ಮೀಟರ್ ಜಿಗಿದು ಬಂಗಾರದ ಪದಕ ಪಡೆದುಕೊಂಡಿದ್ದಾರೆ.
16 ವರ್ಷದೊಳಗಿನವರ ವಿಭಾಗದಲ್ಲಿ ಗೌತಮಿ ಗೌಡ ಎತ್ತರ ಜಿಗಿತದಲ್ಲಿ 1.65ಮೀಟರ್ ಜಿಗಿದು ಬಂಗಾರದ ಪದಕ ಪಡೆದುಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಗೌರಂಗಿ ಗೌಡ 80 ಮೀಟರ್ ಹರ್ಡಲ್ಸ್‌ನಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಈ ಮೂವರು ಕ್ರೀಡಾಪಟುಗಳು ಸೆ.9ರಿಂದ 11ರವರೆಗೆ ಆಂದ್ರಪ್ರದೇಶದ ಗುಂಟೂರಿನಲ್ಲಿ ನಡೆಯಲಿರುವ ದಕ್ಷಿಣ ವಲಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.