

ಶಿವಮೊಗ್ಗ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆರ್‌ಎಸ್‌ಎಸ್ ಕಾರ್ಯಕರ್ತರು ಕಾನೂನು ಕೈಗೆ ತೆಗೆದುಕೊಳ್ಳುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರವಾಗಿ ಆರೋಪಿಸಿದರು.
ಬಿಜೆಪಿ ಅಧಿಕಾರದಲ್ಲಿ ಸೇಡಿನ ರಾಜಕಾರಣ ನಡೆಯುತ್ತಿದೆ. ವಿರೋಧಿಗಳ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಲಾಗುತ್ತಿದೆ. ಧರ್ಮ, ಜಾತಿಯ ಹೆಸರಿನಲ್ಲಿ ರಾಜಕೀಯ, ಗಲಭೆಯಲ್ಲಿ ರಾಜಕಾರಣ ಮಾಡುವುದು. ಹೆಣದ ಮೇಲೆ ರಾಜಕೀಯ ಮಾಡುವುದು ಬಿಜೆಪಿ ತಂತ್ರವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನು ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ಸಿಬಿಐ ತನಿಖೆಗೆ ವಹಿಸಿದ್ದೆ. ಆಗಲೂ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದುದು ಬಿಜೆಪಿಯೇ. ಪರೇಶ್ ಮೇಸ್ತಾ ಕೊಲೆಯಾಗಿಲ್ಲ, ಆತನದ್ದು ಸಹಜ ಸಾವು ಎಂದು ಸಿಬಿಐ ವರದಿ ನೀಡಿದೆ. ಆಗ ಪರೇಶ್ ಮೇಸ್ತಾ ಹೆಣದ ಮೇಲೆ ರಾಜಕೀಯ ಮಾಡಿದ್ದ ಬಿಜೆಪಿಯವರು, ಈಗ ಸಿದ್ದರಾಮಯ್ಯ ಸಾಕ್ಷೃ ನಾಶ ಮಾಡಿದ್ದಾರೆ ಎಂದು ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ಬಿಜೆಪಿಯವರದ್ದು ಲಜ್ಜೆಗೆಟ್ಟ ರಾಜಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಲಾಟೆ ಮಾಡಿಸೋದೇ ಈಶ್ವರಪ್ಪ
ಶಿವಮೊಗ್ಗದಲ್ಲಿ ಗಲಾಟೆ ಮಾಡಿಸೋದೇ ಕೆ.ಎಸ್.ಈಶ್ವರಪ್ಪ. ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟಿ ಗಲಭೆಗೆ ಕಾರಣರಾಗುತ್ತಿದ್ದಾರೆ. ಹರ್ಷ ಎಂಬ ಯುವಕ ಹತ್ಯೆಯಾದ ಬಳಿಕ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿತ್ತು. ಆದರೆ ಹರ್ಷನ ಹೆಣದ ಮೆರವಣಿಗೆ ಮಾಡುವ ಮೂಲಕ ಕಾನೂನನ್ನೇ ಈಶ್ವರಪ್ಪ ಉಲ್ಲಂಘಿಸಿದ್ದರು. ಆ ಸಂದರ್ಭದಲ್ಲಿ ಹಿಂಸಾಚಾರ ಉಂಟಾಗಿತ್ತು. ಶಾಸಕರಾದವರೇ ಹೀಗೆ ವರ್ತಿಸಿದರೆ ಹೇಗೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.