

ಶಿವಮೊಗ್ಗ: ನಗರ ಪಾಲಿಕೆಯ ನಾಲ್ಕನೇ ಅವಧಿಗೆ ಮೇಯರ್, ಉಪಮೇಯರ್ ಚುನಾವಣೆಗೆ ಸರ್ಕಾರ ಮೀಸಲಾತಿ ನಿಗದಿಪಡಿಸಿದೆ. ಮೇಯರ್ ಸ್ಥಾನ ಬಿಸಿಎಂಎ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಇದರೊಂದಿಗೆ ಸ್ಥಳೀಯ ಸಂಸ್ಥೆ ರಾಜಕಾರಣ ಗರಿಗೆದರಿದೆ.
ವಿಧಾನಸಭೆ ಚುನಾವಣೆಗೆ ಇನ್ನು ಆರು ತಿಂಗಳು ಇರುವಾಗ ನಡೆಯುತ್ತಿರುವ ಮೇಯರ್, ಉಪಮೇಯರ್ ಆಯ್ಕೆಯಲ್ಲಿ ಜಾತಿ, ಪಕ್ಷ ಸಂಘಟನೆ, ಮತಗಳಿಕೆ ಎಲ್ಲವನ್ನೂ ಪರಿಗಣಿಸಿಯೇ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸುವುದು ನಿಶ್ಚಿತ. ಮೇಲ್ನೋಟಕ್ಕೆ ಅರ್ಹರ ಪಟ್ಟಿ ದೊಡ್ಡದಿದ್ದರೂ ಅತ್ಯಂತ ಸುಲಭವಾಗಿ ಅಭ್ಯರ್ಥಿ ಆಯ್ಕೆ ಮಾಡಲು ಬಿಜೆಪಿ ಸೂತ್ರ ಸಿದ್ಧಪಡಿಸಿಕೊಂಡಿದೆ.
ಬಿಜೆಪಿ ಸಂಪೂರ್ಣ ಬಹುಮತ ಹೊಂದಿರುವ ಶಿವಮೊಗ್ಗ ನಗರ ಪಾಲಿಕೆಯಲ್ಲಿ ಐವರು ಪುರುಷ ಸದಸ್ಯರು ಬಿಸಿಎಂಎ ವರ್ಗಕ್ಕೆ ಸೇರಿದ್ದಾರೆ. ಹೀಗಾಗಿ ಅಧಿಕಾರದ ಗದ್ದುಗೆಯೇರಲು ಹಲವರಿಗೆ ಅವಕಾಶವಿದೆ. ಇದರಲ್ಲಿ ಹಿರಿತನ, ಪಕ್ಷ ನಿಷ್ಠೆ, ವಿವಿಧ ಹಂತಗಳಲ್ಲಿ ಅಧಿಕಾರ ನಡೆಸಿದ ಅನುಭವವನ್ನು ಬಿಜೆಪಿ ಪ್ರಮುಖರು ಗಣನೆಗೆ ತೆಗೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು.
ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಮೀಸಲು ಅರ್ಹತೆ ಪಡೆದ 12 ಮಹಿಳಾ ಸದಸ್ಯರ ಪೈಕಿ ಮೊದಲ ಬಾರಿಗೆ ಪಾಲಿಕೆ ಪ್ರವೇಶಿಸಿದವರೇ ಹೆಚ್ಚು. ಗಾಂಧಿ ಬಜಾರ್ ಪಶ್ಚಿಮ ವಾರ್ಡ್ ಪ್ರತಿನಿಧಿಸುತ್ತಿರುವ ಭಾನುಮತಿ ವಿನೋದ್ ಕುಮಾರ್, ಗಾಂಧಿ ಬಜಾರ್ ಪೂರ್ವ ವಾರ್ಡ್ ಸದಸ್ಯೆ ಕಲ್ಪನಾ ರಮೇಶ್, ರವೀಂದ್ರ ನಗರ ವಾರ್ಡ್‌ನ ಸದಸ್ಯೆ ಆರತಿ ಪ್ರಕಾಶ್, ಸೂಳೆಬೈಲ್ ವಾರ್ಡ್‌ನ ಸಂಗೀತಾ ನಾಗರಾಜ್, ಕಲ್ಲಹಳ್ಳಿ ವಾರ್ಡ್‌ನ ಅನಿತಾ ರವಿಶಂಕರ್ ಮೊದಲ ಬಾರಿಗೆ ಆಯ್ಕೆಯಾದವರು.
ಸುನೀತಾ ಅಣ್ಣಪ್ಪ, ಸುರೇಖಾ ಮುರಳೀಧರ್, ಸುವರ್ಣಾ ಶಂಕರ್, ಲತಾ ಗಣೇಶ್ ಈಗಾಗಲೇ ಅಧಿಕಾರ ಪಡೆದುಕೊಂಡಿದ್ದಾರೆ. ಲಕ್ಷ್ಮೀ ಶಂಕರನಾಯ್ಕ ಹಿಂದೆ ಎರಡು ಬಾರಿ ನಗರಸಭೆ ಸದಸ್ಯರಾಗಿದ್ದರು. ಸ್ಥಳೀಯ ಆಡಳಿತದಲ್ಲಿ ಹಿರಿತನವಿದೆ. ಮೇಯರ್, ಉಪಮೇಯರ್ ಆಯ್ಕೆಗೆ ಚುನಾವಣೆ ದಿನಾಂಕ ನಿಗದಿಯಾಗುವ ವೇಳೆಗೆ ಬಿಜೆಪಿ ಪ್ರಮುಖರು ಸಭೆ ನಡೆಸಿ ಮೇಯರ್, ಉಪಮೇಯರ್ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದ್ದಾರೆ. ಅಲ್ಲಿಯವರೆಗೆ ಆಕಾಂಕ್ಷಿಗಳು ಎಲ್ಲ ರೀತಿಯ ಪ್ರಯತ್ನ ಮಾಡುವ ಅವಕಾಶವಿದೆ.
ಮೇಯರ್ ಸ್ಥಾನದ ಅರ್ಹರು
ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಾಗಿರುವ ಬಿಸಿಎಂಎ ಮೀಸಲಾತಿ ಹೊಂದಿರುವ ಐವರು ಮೊದಲ ಬಾರಿಗೆ ಪಾಲಿಕೆ ಸದಸ್ಯರಾದವರು. ವಿನೋಬ ನಗರ ವಾರ್ಡ್‌ನ ರಾಹುಲ್ ಪಿ.ಬಿದರೆ ಪಕ್ಷೇತರರಾಗಿ ಗೆದ್ದು ಬಳಿಕ ಬಿಜೆಪಿಗೆ ಸೇರ್ಪಡೆಯಾದವರು. ಅರಮನೆ ವಾರ್ಡ್‌ನ ಪಿ.ಪ್ರಭಾಕರ್, ಆರ್‌ಎಂಎಲ್ ನಗರ ವಾರ್ಡ್‌ನ ಎಸ್.ಜಿ.ರಾಜು, ಮಿಳಘಟ್ಟ ವಾರ್ಡ್‌ನ ಯು.ಎಚ್.ವಿಶ್ವನಾಥ್, ಗೋಪಾಲಗೌಡ ವಾರ್ಡ್‌ನ ಎಸ್.ಜ್ಞಾನೇಶ್ವರ್ ಬಿಸಿಎಂಎ ಮೀಸಲಾತಿ ಹೊಂದಿದ್ದಾರೆ.
ಎಸ್.ಜ್ಞಾನೇಶ್ವರ್‌ಗೆ ಹೆಚ್ಚಿದ ಅವಕಾಶ
ಬಿಜೆಪಿ ಜಿಲ್ಲಾ ಪ್ರಕೋಷ್ಟದ ಸಂಯೋಜಕರೂ ಆಗಿರುವ ಎಸ್.ಜ್ಞಾನೇಶ್ವರ್, ಮೊದಲ ಬಾರಿಗೆ ನಗರ ಪಾಲಿಕೆ ಸದಸ್ಯರಾದರೂ ಬಿಜೆಪಿ ಸಂಘಟನೆಯಲ್ಲಿ ಹಲವು ದಶಕಗಳಿಂದ ತೊಡಗಿಸಿಕೊಂಡಿದ್ದಾರೆ. ಬಿಜೆಪಿ ನಗರಾಧ್ಯಕ್ಷರಾಗಿ, ಸೂಡಾ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಬಿಜೆಪಿ ಪ್ರಮುಖರೊಂದಿಗೆ ಉತ್ತಮ ಬಾಂಧವ್ಯವೂ ಇದೆ. ಇವರನ್ನು ಮೇಯರ್ ಸ್ಥಾನಕ್ಕೆ ಪರಿಗಣಿಸಿದರೆ ಪಾಲಿಕೆಯ ಬಿಜೆಪಿ ಸದಸ್ಯರು ಯಾರೂ ಅಪಸ್ವರ ವ್ಯಕ್ತಪಡಿಸುವ ಸಾಧ್ಯತೆಗಳಿಲ್ಲ. ಹೀಗಾಗಿ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಇವರಿಗೆ ಅವಕಾಶ ಹೆಚ್ಚಿದೆ.
ಉಪಮೇಯರ್ ಸ್ಥಾನಕ್ಕೆ ಯಾರು?
ಸುರೇಖಾ ಮುರಳೀಧರ್ ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸುವ ಸಂದರ್ಭದಲ್ಲೇ ಆ ಸ್ಥಾನಕ್ಕೆ ಹಿರಿಯ ಸದಸ್ಯೆ, ಗೋಪಶೆಟ್ಟಿಕೊಪ್ಪ ವಾರ್ಡ್‌ನ ಪ್ರತಿನಿಧಿ ಲಕ್ಷ್ಮೀ ಶಂಕರನಾಯ್ಕ ಅವರ ಹೆಸರು ಪ್ರಸ್ತಾಪವಾಗಿತ್ತು. ಅದೇ ಸಮಯದಲ್ಲಿ ಮೇಯರ್ ಸ್ಥಾನಕ್ಕೆ ಅನಿತಾ ರವಿಶಂಕರ್ ಸಾಕಷ್ಟು ಪ್ರಯತ್ನ ನಡೆಸಿ ಕಡೇ ಕ್ಷಣದಲ್ಲಿ ಅವಕಾಶ ವಂಚಿತರಾಗಿದ್ದರು.
ಈಗ ಉಪಮೇಯರ್ ಸ್ಥಾನಕ್ಕೆ ಅನಿತಾ ರವಿಶಂಕರ್ ಹಾಗೂ ಲಕ್ಷ್ಮೀ ಶಂಕರನಾಯ್ಕ ಹೆಸರು ಮುನ್ನೆಲೆಗೆ ಬಂದಿದೆ. ಕಳೆದ ಬಾರಿ ಮೇಯರ್ ಸ್ಥಾನ ವಂಚಿತ ಅನಿತಾ ರವಿಶಂಕರ್ ಅವರಿಗೆ ಅವಕಾಶ ಸಿಗುವುದೋ ಅಥವಾ ಹಿರಿತನದ ಆಧಾರದಲ್ಲಿ ಲಕ್ಷ್ಮೀ ಶಂಕರನಾಯ್ಕ ಅವರ ಸ್ಪರ್ಧೆಗೆ ಬಿಜೆಪಿ ಪ್ರಮುಖರು ಅಸ್ತು ಎನ್ನಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇದೇ ಕೊನೆಯ ಚುನಾವಣೆ?
ಈ ಬಾರಿಯ ನಗರ ಪಾಲಿಕೆಯಲ್ಲಿ ಮೇಯರ್, ಉಪಮೇಯರ್ ಸ್ಥಾನಕ್ಕೆ ಬಹುತೇಕ ಇದೇ ಕೊನೆಯ ಚುನಾವಣೆ. ಪಾಲಿಕೆ ಅವಧಿ ಮುಂದಿನ ನವೆಂಬರ್‌ಗೆ ಮುಕ್ತಾಯವಾಗಲಿದೆ. ಈಗ ಮೇಯರ್, ಉಪಮೇಯರ್ ಸ್ಥಾನದ ಚುನಾವಣೆಗೆ ನೋಟಿಸ್ ಜಾರಿಗೊಳಿಸಬೇಕು. ಬಳಿಕ ಪ್ರಾದೇಶಿಕ ಆಯುಕ್ತರ ಸಮಯ ನೋಡಿಕೊಂಡು ಚುನಾವಣೆಗೆ ದಿನಾಂಕ ನಿಗದಿ ಮಾಡಬೇಕು. ಇದೆಲ್ಲಾ ಮುಗಿಯುವಾಗ ಒಂದು ತಿಂಗಳು ಕಳೆಯುತ್ತದೆ.
ಮುಂದಿನ ಬಾರಿ ಆಯ್ಕೆಯಾಗಲಿರುವ ಮೇಯರ್, ಉಪಮೇಯರ್ ಅವರ ಅವಧಿ ಮುಂದಿನ ವರ್ಷ ಸೆಪ್ಟೆಂಬರ್‌ಗೆ ಅಂತ್ಯಗೊಳ್ಳಲಿದೆ. ಬಳಿಕ ಕೇವಲ ಎರಡು ತಿಂಗಳಿಗೋಸ್ಕರ ಮತ್ತೆ ಮೇಯರ್, ಉಪಮೇಯರ್ ಚುನಾವಣೆ ನಡೆಯುವುದು ಕಷ್ಟ. ಹೀಗಾಗಿ ಪಾಲಿಕೆಗೆ ಇದೇ ಕೊನೆಯ ಚುನಾವಣೆಯಾಗುವ ಸಾಧ್ಯತೆಯಿದೆ.
ಪಾಲಿಕೆಯ ಬಲಾಬಲ:
ಬಿಜೆಪಿ-20
ಕಾಂಗ್ರೆಸ್-7
ಜೆಡಿಎಸ್-2
ಎಸ್‌ಡಿಪಿಐ-1
ಪಕ್ಷೇತರ-5
ಒಟ್ಟು-35