ಮಣ್ಣಿಗೆ ಅನುಗುಣವಾಗಿ ರಸಗೊಬ್ಬರ ಬಳಕೆಗೆ ವಿಜ್ಞಾನಿಗಳ ಸಲಹೆ

Field Day DSR Paddy cultivation (3) (1)
Published on

ಶಿವಮೊಗ್ಗ: ರೈತರು ತಮ್ಮ ಜಮೀನಿನ ಮಣ್ಣನ್ನು ಪರೀಕ್ಷಿಸಿ ಅದಕ್ಕನುಗುಣವಾಗಿ ರಸಗೊಬ್ಬರ ಬಳಸುವಂತೆ ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಬಿ.ಸಿ.ಹನುಮಂತಸ್ವಾಮಿ ಸಲಹೆ ನೀಡಿದರು.

ತಾಲೂಕಿನ ಚಾಮೇನಹಳ್ಳಿಯ ಬಾಗೀಶ್ ಅವರ ಜಮೀನಿನಲ್ಲಿ ಕೆವಿಕೆಯಿಂದ ಭತ್ತದ ನೇರ ಬಿತ್ತನೆ ಮುಂಚೂಣಿ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಮಣ್ಣು ಮಾದರಿ ಮತ್ತು ನೀರು ಪರೀಕ್ಷೆ ಪ್ರಯೋಗಾಲಯವಿದ್ದು, ರೈತರು ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಪ್ರತಿವರ್ಷ ಅನೇಕ ಒಳ ಆವರಣ ಮತ್ತು ಹೊರ ಆವರಣ ತರಬೇತಿಗಳು, ವೃತ್ತಿಪರ ತರಬೇತಿಗಳು, ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗುತ್ತದೆ. ಕೇಂದ್ರದಲ್ಲಿ ನಡೆಯುವ ತರಬೇತಿಗಳಲ್ಲಿ ಆಧುನಿಕ ತಂತ್ರಜ್ಞಾನಗಳು, ಕೃಷಿಯಲ್ಲಿ ಹೊಸ ಆವಿಷ್ಕಾರದ ಮಾಹಿತಿ, ವಿವಿಧ ಬೆಳೆಗಳ ರೋಗ ಮತ್ತು ಕೀಟಗಳ ನಿರೋಧಕ ತಳಿಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

 ವಿಜ್ಞಾನಿ (ಬೇಸಾಯಶಾಸ್ತ್ರ) ಎಂ.ಬಸವರಾಜ ಮಾತನಾಡಿ, ಸಾಂಪ್ರದಾಯಿಕ ವಿಧಾನದಲ್ಲಿ ಬೆಳೆಯುವ ಭತ್ತವು ತೀವ್ರ ನೀರಿನ ಬಳಕೆ ಮಾತ್ರವಲ್ಲದೆ ಶ್ರಮದಾಯಕವಾಗಿರುತ್ತದೆ. ನೀರಿನ ಕೊರತೆ ಕಡಿಮೆಗೊಳಿಸಲು ಹಾಗೂ ಕ್ಷೀಣಿಸುತ್ತಿರುವ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ನೇರ ಭತ್ತ ಬಿತ್ತನೆ ಪರ್ಯಾಯ ವಿಧಾನವಾಗಿದೆ. ಈ ವಿಧಾನವು ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆ ಹಾಗೂ ರೈತನಿಗೆ ಉತ್ತಮ ಆದಾಯಕ್ಕೆ ಮೂಲವಾಗಿದೆ ಎಂದರು.

ವಿಜ್ಞಾನಿಗಳಾದ ಡಾ. ಪಿ.ಅರುಣ್‌ಕುಮಾರ್, ಜಿ.ಬಿ.ಸ್ಮಿತಾ ಮತ್ತು ಸುತ್ತಮುತ್ತಲಿನ ರೈತರು ಕಾರ್ಯಕ್ರಮದಲ್ಲಿ ಮಾಹಿತಿ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net