

ಶಿವಮೊಗ್ಗ: ಮುಂದಿನ ದಿನಗಳಲ್ಲಿ ನೀರಿನಿಂದ ಅನಾಹುತವಾಗಲಿದೆ. ಕಾರ್ತಿಕ ಮಾಸದಲ್ಲಿ ಜಲ ಗಂಡಾಂತರ ಉಂಟಾಗಲಿದೆ. ಭೂಮಿ ನಡುಗುತ್ತದೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಎಚ್ಚರಿಸಿದ್ದಾರೆ. ಆ ಆಮೂಲಕ ನೀರು ಹಾಗೂ ಭೂಕಂಪನದಿಂದ ಹಾನಿ ಉಂಟಾಗುವ ಮುನ್ಸೂಚನೆ ನೀಡಿದ್ದಾರೆ.
ತಾಲೂಕಿನ ಕುಂಚೇನಹಳ್ಳಿಯ ಅಯ್ಯನಕೆರೆಗೆ ಗುರುವಾರ ಬಾಗಿನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ನೀರು, ಭೂಕಂಪ ಮಾತ್ರವಲ್ಲದೇ ಬೆಂಕಿ ಅನಾಹುತಗಳೂ ಸಂಭವಿಸಲಿವೆ. ಇದೆಲ್ಲದರಿಂದ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು. ಜನರು ಹೆಚ್ಚು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದೊಂದೇ ಇದರಿಂದ ಪಾರಾಗುವ ಮಾರ್ಗ ಎಂದು ಪರಿಹಾರವನ್ನೂ ಸೂಚಿಸಿದರು.
ಈ ಭಾಗದ ಜನರ ಅನುಕೂಲಕ್ಕಾಗಿ ಹಿರಿಯರು ನಿರ್ಮಿಸಿದ ಅಯ್ಯನಕೆರೆ ಮಳೆಯಿಂದಾಗಿ ಭರ್ತಿಯಾಗಿರುವುದು ಹರ್ಷದ ಸಂಗತಿಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಜನರಿಗೆ ಅನುಕೂಲವಾಗಲಿದೆ ಎಂದರು.