ಚಾಮುಂಡೇಶ್ವರಿ ಪರಿಸರ ಪ್ರಜ್ಞೆ ಬೆಳೆಸಲಿ:ಪದ್ಮಶ್ರೀ ತುಳಸಿ ಗೌಡ ಆಶಯ

dasara
Published on

ಶಿವಮೊಗ್ಗ: ಗಿಡಗಳನ್ನು ಬೆಳೆಸಿ ಅರಣ್ಯಗಳನ್ನು ಸಂರಕ್ಷಿಸಿದರೆ ನಾಡು ಸುಬೀಕ್ಷವಾಗುತ್ತದೆ. ನಾಡದೇವಿ ಚಾಮುಂಡೇಶ್ವರಿ ಎಲ್ಲರಲ್ಲೂ ಪರಿಸರ ಪ್ರಜ್ಞೆ ಬೆಳೆಸಲಿ ಎಂದು ಪದ್ಮಶ್ರೀ ಪುರಸ್ಕೃತೆ, ಪರಿಸರ ಪ್ರೇಮಿ ತುಳಸಿ ಗೌಡ ಆಶಿಸಿದರು.

ನಗರ ಪಾಲಿಕೆಯಿಂದ ಆಯೋಜಿಸಿರುವ ದಸರಾ ಉತ್ಸವಕ್ಕೆ ಸೋಮವಾರ ಕೋಟೆ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಶಿವಮೊಗ್ಗದ ದಸರಾ ಆಚರಣೆ, ಇಲ್ಲಿನ ಆಚಾರ ವಿಚಾರಗಳನ್ನು ಕಂಡು ಮನಸ್ಸು ತುಂಬಿ ಬಂದಿದೆ. ಚಾಮುಂಡೇಶ್ವರಿ ಇಡೀ ನಾಡಿಗೆ ಒಳಿತು ಮಾಡಲಿ ಎಂದು ಹೇಳಿದರು.

ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ದಸರಾ ಸಂದರ್ಭದಲ್ಲಿನ ವಿಜಯದಶಮಿಗೆ ವಿಶೇಷ ಅರ್ಥ ಹಾಗೂ ಹಿನ್ನೆಲೆಯಿದೆ. ಮಾಡುವ ಎಲ್ಲ ಕಾರ್ಯಗಳಲ್ಲಿ ಯಶ ದೊರೆಯಲಿ ಎಂಬುದು ಇದರ ಆಶಯ. ರಾಷ್ಟ್ರ ವಿರೋಧಿ ಶಕ್ತಿಗಳನ್ನು ಹಿಮ್ಮೆಟ್ಟಿಸುವ ಮೂಲಕ ದೇಶವನ್ನು ರಕ್ಷಣೆ ಮಾಡುವ ಬಗ್ಗೆ ದಸರಾದ ವಿಶೇಷ ಸಂದರ್ಭದಲ್ಲಿ ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕೆಂದರು.

ಪುರಾಣ ಕಾಲದಲ್ಲಿ ಮನುಕುಲಕ್ಕೆ ತೊಂದರೆ ಕೊಡುತ್ತಿದ್ದ ರಾಕ್ಷಸರನ್ನು ತಾಯಿ ಚಾಮುಂಡೇಶ್ವರಿ ಸಂಹಾರ ಮಾಡಿದಳು. ಈಗ ಕೆಲ ದುಷ್ಟರು ಸಾಮಾನ್ಯ ಜನರಿಗೆ ತೊಂದರೆ ನೀಡುತ್ತಿದ್ದಾರೆ. ತಾಯಿ ಚಾಮುಂಡಿಯ ಆಶೀರ್ವಾದದಿಂದ ಇಂತಹ ದುಷ್ಟಶಕ್ತಿಗಳನ್ನು ಮೆಟ್ಟಿ ನಿಲ್ಲುವ ನಿಲುವು ನಮ್ಮದಾಗಬೇಕೆಂದರು.

ರಾಷ್ಟ್ರದ ಹಲವು ರಾಜ್ಯಗಳಲ್ಲಿ ರಾಷ್ಟ್ರದ್ರೋಹಿ ಶಕ್ತಿಗಳು ತಲೆ ಎತ್ತುತ್ತಿವೆ. ಇದಕ್ಕೆ ಅಂಜಬೇಕಾದ ಅವಶ್ಯಕತೆಯಿಲ್ಲ. ರಾಷ್ಟ್ರದ್ರೋಹಿಗಳನ್ನು ಮೆಟ್ಟಿನಿಲ್ಲಲು ನಾವು ಸಶಕ್ತರಾಗಿದ್ದೇವೆ. ಅನೇಕ ಹಿರಿಯರು ದೇಶಕ್ಕೆ ಸ್ವಾತಂತ್ರೃ ತಂದು ಕೊಡಲು ಪ್ರಾಣತ್ಯಾಗ ಮಾಡಿದ್ದಾರೆ. ಅವರ ಆಶೀರ್ವಾದ ರಾಷ್ಟ್ರದ ಮೇಲಿದೆ. ದೇಶ ಹಾಳು ಮಾಡುವ ಶಕ್ತಿಗಳ ಬಯಕೆ ಯಾವುದೇ ಕಾರಣಕ್ಕೂ ಈಡೇರುವುದಿಲ್ಲ ಎಂದರು.

ಮೇಯರ್ ಸುನೀತಾ ಅಣ್ಣಪ್ಪ, ಉಪಮೇಯರ್ ಕೆ.ಶಂಕರ್ ಗನ್ನಿ, ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಪ್ರತಿಪಕ್ಷ ನಾಯಕಿ ರೇಖಾ ರಂಗನಾಥ್, ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೇಶ್, ಅನಿತಾ ರವಿಶಂಕರ್, ಧೀರರಾಜ್ ಹೊನ್ನವಿಲೆ, ಯಮುನಾ ರಂಗೇಗೌಡ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net