ಭಾರತ್ ಜೋಡೋಗೆ ಜಿಲ್ಲೆಯಿಂದ 35 ಸಾವಿರ ಮಂದಿ: ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಮಾಹಿತಿ

cong
Published on

ಶಿವಮೊಗ್ಗ: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಪಾದಯಾತ್ರೆ ಅ.10 ರಿಂದ 12ರವರೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಸಾಗಲಿದ್ದು, ಶಿವಮೊಗ್ಗ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಐದು ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು.

ಇದುವರೆಗೆ ಭಾರತ್ ಜೋಡೋ ಪಾದಯಾತ್ರೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಪಾದಯಾತ್ರೆ ಜರುಗುವ ಸಂದರ್ಭದಲ್ಲಿ ಶಿವಮೊಗ್ಗದ ಕಾರ್ಯಕರ್ತರು ಭಾಗವಹಿಸುವಂತೆ ಕೆಪಿಸಿಸಿ ಸೂಚನೆ ನೀಡಿದೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ ತಲಾ 50 ಬಸ್‌ಗಳಲ್ಲಿ ಕಾರ್ಯಕರ್ತರು ತೆರಳಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೇಂದ್ರ ಸರ್ಕಾರ ಸಾಮಾನ್ಯ ಜನರಿಗೆ ಬಲವಾದ ಹೊಡೆತ ನೀಡಿದೆ. ಭೂತಾನ್‌ನಿಂದ ಶೂನ್ಯ ತೆರಿಗೆ ಮೂಲಕ ಅಡಕೆ ಆಮದು ಮಾಡಿಕೊಂಡು ಇಲ್ಲಿನ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ, ಸಿಬಿಐನ್ನು ಪ್ರಯೋಗ ಮಾಡಿ ಪ್ರತಿಪಕ್ಷ ನಾಯಕರನ್ನು ಹಣಿಯುವ ಕೆಲಸ ಮಾಡುತ್ತಿದೆ. ಇದೆಲ್ಲದರ ಪರಿಣಾಮ ಭಾರತ್ ಜೋಡೋಗೆ ಸಾಮಾನ್ಯ ಜನರಿಂದಲೂ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಜನರನ್ನು ಒಗ್ಗೂಡಿಸುವ ಯಾತ್ರೆ

ಕೇಂದ್ರ ಸರ್ಕಾರ ದೇಶದಲ್ಲಿ ಅಶಾಂತಿ ಮೂಡಿಸಿದೆ. ಹೀಗಾಗಿ ಭಾರತ್ ಜೋಡೋ ಕೇವಲ ಪಾದಯಾತ್ರೆಯಲ್ಲ. ಅದು ಜನರ ಮನಸ್ಸನ್ನು ಒಗ್ಗೂಡಿಸುವ ಯಾತ್ರೆ. ಆದರೆ ಬಿಜೆಪಿಯವರು ಕಾಂಗ್ರೆಸ್ ದೇಶ ವಿಭಜನ ಮಾಡಿದೆ. ದೇಶ ಜೋಡಿಸಲಿ ಎಂದು ಟೀಕೆ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಅವರಿಗೆ ಅಷ್ಟೊಂದು ಸಾಮರ್ಥ್ಯವಿದ್ದರೆ ಪಾಕ್ ಮೇಲೆ ಯುದ್ಧ ಮಾಡಿ ಭಾರತದೊಂದಿಗೆ ಜೋಡಿಸಲಿ ಎಂದು ಎಚ್.ಎಸ್.ಸುಂದರೇಶ್ ಸವಾಲು ಹಾಕಿದರು.

ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್, ನಗರ ಪಾಲಿಕೆ ಪ್ರತಿಪಕ್ಷ ನಾಯಕಿ ರೇಖಾ ರಂಗನಾಥ್, ಸದಸ್ಯರಾದ ಎಚ್.ಸಿ.ಯೋಗೇಶ್, ಯಮುನಾ ರಂಗೇಗೌಡ, ಮೆಹಕ್ ಷರೀಫ್, ಪ್ರಮುಖರಾದ ಇಕ್ಕೇರಿ ರಮೇಶ್, ಚಂದ್ರಭೂಪಾಲ್, ಚಂದನ್, ಎನ್.ಡಿ.ಪ್ರವೀಣ್‌ಕುಮಾರ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net