

ಶಿವಮೊಗ್ಗ: ಬಿಜೆಪಿ ಆಡಳಿತದಲ್ಲಿ ಜನರ ಬದುಕು ದುರ್ಬರವಾಗಿದೆ. ಬಡವರು ಜೀವನ ಸಾಗಿಸುವುದೇ ಕಷ್ಟವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ದೂರಿದರು.
ಎಐಸಿಸಿಯ ಭಾರತ್ ಜೋಡೊ ಮಾದರಿಯಲ್ಲಿ ಜಿಲ್ಲಾ ಕಾಂಗ್ರೆಸ್ ರೂಪಿಸಿರುವ ನಾವು ಸದಾ ನಿಮ್ಮೊಂದಿಗೆ ಜನ ಸಂಪರ್ಕ ಕಾರ್ಯಕ್ರಮಕ್ಕೆ ಶರಾವತಿ ನಗರದಲ್ಲಿ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ತನ್ನ ಜವಾಬ್ದಾರಿ ಮರೆಯುತ್ತಿದೆ. ದಿನದಿಂದ ದಿನಕ್ಕೆ ಬಡವರ ಕಷ್ಟಗಳು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾಮಾಜಿಕ ಭದ್ರತಾ ಯೋಜನೆಗಳು ಸುಲಭವಾಗಿ ದೊರೆಯುತ್ತಿಲ್ಲ. ವಿಧವಾ ವೇತನ, ವೃದ್ಧಾಪ್ಯ ವೇತನ, ಪಡಿತರ ಚೀಟಿ, ಕಾರ್ಮಿಕ ಕಾರ್ಡ್ ಪಡೆಯಲು ಜನರು ಕಚೇರಿಗಳಿಗೆ ಅಲೆಯಬೇಕಾಗಿದೆ. ಜನಸಾಮಾನ್ಯರ ಅಹವಾಲು ಸ್ವೀಕರಿಸಿ, ಅವರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮನೆ ಮನೆಗಳಿಗೆ ಭೇಟಿ ಮಾಡಲಾಗುತ್ತಿದೆ ಎಂದರು.
ನಗರದ ಪ್ರತಿ ವಾರ್ಡ್‌ನಲ್ಲಿ ಸೆ.12ರಿಂದ ಈ ಕಾರ್ಯಕ್ರಮ ಮುಂದುವರಿಯಲಿದೆ. ವಾರ್ಡ್‌ನಲ್ಲಿರುವ ಪಕ್ಷದ ಮುಖಂಡರು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಲಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಸಾಮಾಜಿಕ ಜಾಲತಾಣದ ಉಪಾಧ್ಯಕ್ಷೆ ಸೌಗಂಧಿಕಾ, ಪ್ರಮುಖರಾದ ಪ್ರವೀಣ್, ಜ್ಯೋತಿ ಅರಳಪ್ಪ, ಜ್ಞಾನಪ್ರಕಾಶ್, ಶ್ರೀಧರ್, ಕುಮಾರಸ್ವಾಮಿ, ಕೃಷ್ಣಪ್ಪ, ಆಕಾಶ್, ಮಂಜುಳಾ, ನಾಗೇಶ್ ಮುಂತಾದವರು ಈ ಸಂದರ್ಭದಲ್ಲಿದ್ದರು.