ಸಂಪುಟದಲ್ಲಿ ಜಾತಿವಾರು, ಜಿಲ್ಲಾವಾರು ಪ್ರಾತಿನಿಧ್ಯ ಕಷ್ಟ ಎಂದ ಸಚಿವ ಈಶ್ವರಪ್ಪ

k s eshwara (1)
Published on

ಶಿವಮೊಗ್ಗ: ಈಗಿನ ಪರಿಸ್ಥಿತಿಯಲ್ಲಿ ಸಚಿವ ಸಂಪುಟದಲ್ಲಿ ಜಾತಿವಾರು, ಜಿಲ್ಲಾವಾರು ಪ್ರಾತಿನಿಧ್ಯ ಒದಗಿಸುವುದು ಕಷ್ಟ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದವರಿಗೆ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು. ಈಗಾಗಲೇ ಚುನಾವಣೆಯಲ್ಲಿ ಗೆದ್ದವರಿಗೆ ಅವಕಾಶ ನೀಡಲಾಗಿದೆ. ಇನ್ನೂ ಕೆಲವರಿಗೆ ನೀಡಿರುವ ಭರವಸೆ ಈಡೇರಿಸಬೇಕಿದೆ ಎಂದರು.
ಸಚಿವ ಸ್ಥಾನಕ್ಕೆ ಹಲವು ಆಕಾಂಕ್ಷಿಗಳಿದ್ದಾರೆ. ಈಗಾಗಲೇ ಸಿಎಂ ಕೇಂದ್ರ ನಾಯಕರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಮೂರ‌್ನಾಲ್ಕು ದಿನಗಳಲ್ಲಿ ಕೇಂದ್ರ ನಾಯಕರು ಸಚಿವ ಸಂಪುಟ ವಿಸ್ತರಣೆಯೋ? ಪುನಾರಚನೆಯೋ? ಎಂಬುದನ್ನು ಪ್ರಕಟಿಸಲಿದ್ದಾರೆ. ಯಾರ‌್ಯಾರಿಗೆ ಅವಕಾಶ ಸಿಗುತ್ತದೋ ಕಾದು ನೋಡಣ ಎಂದರು.
ಮನೆಯಲ್ಲಿ ಮದುವೆಗೆ ಬಂದ ಹುಡುಗಿ ಇದ್ದಾಗ ನೋಡಲು ಗಂಡಿನ ಕಡೆಯವರು ಬರುತ್ತಾರೆ’. ಅದೇ ರೀತಿ ಸಂಪುಟದಲ್ಲಿ ಸಚಿವ ಸ್ಥಾನ ಖಾಲಿಯಿದ್ದಾಗ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುವುದು ಸಹಜ ಎಂದು ಹೇಳಿದರು.
ಮರಾಠ ನಿಗಮ ವಿರೋಧ ಬೇಡ: ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿರುವುದು ಮರಾಠ ಅಭಿವೃದ್ಧಿ ಪ್ರಾಧಿಕಾರವಲ್ಲ, ನಿಗಮ. ಬೇರೆ ನಿಗಮಗಳಂತೆ ಇದೂ ಕಾರ್ಯನಿರ್ವಹಿಸಲಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರು ನಿಗಮಕ್ಕೂ ಮರಾಠಿ ಭಾಷೆಗೂ ತಳುಕು ಹಾಕುವ ಅಗತ್ಯವಿಲ್ಲ ಎಂಬುದನ್ನು ಮನಗಾಣಬೇಕೆಂದು ಈಶ್ವರಪ್ಪ ಮನವಿ ಮಾಡಿದರು.
ತಮಿಳು, ತೆಲುಗು ಭಾಷಿಗರಂತೆ ಮರಾಠಿಗಳು ಕೂಡಾ ಕನ್ನಡಿಗರೇ ಆಗಿದ್ದಾರೆ. ಅವರು ರಕ್ತಗತವಾಗಿ ಇಲ್ಲಿನ ಜನರೊಂದಿಗೆ ಬೆರೆತಿದ್ದಾರೆ. ಹೀಗಾಗಿ ಮರಾಠ ಅಭಿವೃದ್ಧಿ ನಿಗಮದ ಬಗ್ಗೆ ವಿವಾದ ಸೃಷ್ಟಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net