ಕರೊನಾ ನಿಯಂತ್ರಣಕ್ಕೆ ನಿರ್ದಿಷ್ಟ ಯೋಜನೆ ಇಲ್ಲ: ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಆರೋಪ

28 smg Srinivas
Published on

ಶಿವಮೊಗ್ಗ: ಕೇಂದ್ರ ಸರ್ಕಾರ ಕರೊನಾ ನಿಯಂತ್ರಣ ವಿಚಾರದಲ್ಲಿ ಯಾವುದೇ ನಿರ್ದಿಷ್ಟ ಯೋಜನೆ ಇಲ್ಲದೆ ಹಾಗೂ ಆಡಳಿತ ವರ್ಗದ ಹೊಂದಾಣಿಕೆ ಕೊರತೆಯಿಂದ ಲಕ್ಷಾಂತರ ಜನರ ಬದುಕನ್ನು ಬೀದಿಗೆ ಬರುವಂತೆ ಮಾಡಿದೆ ಎಂದು ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಆರೋಪಿಸಿದರು.

ನಗರದ ಕಾಂಗ್ರೆಸ್ ಪಕ್ಷದ ಕಚೇರಿ ಎದುರು ಗುರುವಾರ ಆಕ್ಸಿಜನ್ ಆಂಬುಲೆನ್ಸ್ ಲೋಕಾರ್ಪಣೆಗೊಳಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರೊನಾದಿಂದ ಜನ ಸಾಯುತ್ತಿಲ್ಲ. ಬದಲಾಗಿ ಸಮರ್ಪಕ ಆಕ್ಸಿಜನ್, ವೆಂಟಿಲೇಟರ್, ರೆಮ್‌ಡೆಸಿವಿರ್ ಕೊರತೆಯಿಂದ ಸಾವಿರಾರು ಜನ ಸಾವನ್ನಪ್ಪಿದ್ದಾರೆ. ಆಕ್ಸಿಜನ್ ಬೆಡ್‌ಗೋಸ್ಕರ ಜನ ಪರಿದಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕರೊನಾ ಮೊದಲನೇ ಅಲೆ ಬಂದಾಗ ಆರೋಗ್ಯ ವ್ಯವಸ್ಥೆಯನ್ನು ಹೆಚ್ಚಿಸಿಕೊಳ್ಳಬೇಕಿದ್ದ ಕೇಂದ್ರ ಸರ್ಕಾರ ತಜ್ಞರ ಸಲಹೆಯನ್ನು ಗಾಳಿಗೆ ತೂರಿತು. ಇದು ಜನರನ್ನು ಸಂಕಷ್ಟದಲ್ಲಿ ಸಿಲುಕಿಸುವ ಜತೆಗೆ ಸೋಂಕು ಪ್ರಸರಣಕ್ಕೆ ನಾಂದಿಹಾಡಿತು. ಮೊದಲ ಅಲೆಯಲ್ಲೂ ಸರ್ಕಾರಕ್ಕೆ ಕರೊನಾ ಬಗ್ಗೆ ದೂರದೃಷ್ಟಿ ಇರಲಿಲ್ಲ. 2ನೇ ಅಲೆಯಲ್ಲೂ ನಿರ್ಲಕ್ಷೃ ಮುಂದುವರಿದಿದೆ ಎಂದು ದೂರಿದರು.

ಕರೊನಾ ನಂತರದ ದಿನಗಳಲ್ಲಿ ಸಮಾಜದಲ್ಲಿ ಉದ್ಭವಿಸುವ ಆತಂಕಗಳಿಗೆ ಸರ್ಕಾರ ನೇರ ಕಾರಣವಾಗಿದೆ. ಜನರ ಬಳಿ ಜೀವನ ನಡೆಸಲು ದುಡ್ಡಿಲ್ಲ. ಜಿಎಸ್‌ಟಿ ಹಿಂಪಡೆಯಿರಿ ಎಂದು ಕೇಳಿದರೂ ಕೇಂದ್ರ ಸರ್ಕಾರ ಹೇರುತ್ತಿದೆ. ಯುವಕರು, ರೈತರ ಬಗ್ಗೆ ಯೋಚಿಸಿ ಅವರ ರಕ್ಷಣೆ, ಉದ್ಯೋಗ ಸೃಷ್ಟಿಸುವ ಹೊಸ ಕಾನೂನನ್ನು ಜಾರಿಗೊಳಿಸಬೇಕಿದೆ ಎಂದರು.

ರಾಷ್ಟ್ರೀಯ ಕಾಂಗ್ರೆಸ್ ಕಾರ್ಯದರ್ಶಿ ಡಿ.ಎಂ.ಸಂದೀಪ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೀಶ್, ಯಮುನಾ ರಂಗೇಗೌಡ, ಯುವ ಮುಖಂಡರಾದ ಕೆ.ರಂಗನಾಥ್, ಸಿ.ಜಿ.ಮಧುಸೂದನ್, ಕೆ.ಚೇತನ್, ಗಣೇಶ್, ಮಹಮ್ಮದ್ ನಿಹಾಲ್, ಆದರ್ಶ ಹುಂಚನಕಟ್ಟೆ, ಪ್ರದೀಪ್, ವಿನಾಯಕ, ವಿನಯ್, ವಿಜಯ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net