ವಿಶ್ವಾಸ ಇಲ್ಲದಿದ್ದರೆ ರಾಜೀನಾಮೆ ಕೊಡಿ: ಸಚಿವ ಈಶ್ವರಪ್ಪ

K.S. Eshwarappa (1)
Published on

ಶಿವಮೊಗ್ಗ: ಹೈಕಮಾಂಡ್ ಮತ್ತು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ವಿಶ್ವಾಸ ಇಲ್ಲದಿದ್ದರೆ ಸಿ.ಪಿ.ಯೋಗೇಶ್ವರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸಿಎಂ ಪುತ್ರನ ಹಸ್ತಕ್ಷೇಪ ಸೇರಿ ಯಾವುದೇ ಸಮಸ್ಯೆಗಳಿದ್ದರೂ ಯೋಗೇಶ್ವರ್ ಹೈಕಮಾಂಡ್‌ಗೆ ದೂರು ನೀಡಿದ್ದು ತಪ್ಪಲ್ಲ. ಆದರೆ ಅದನ್ನು ಎಲ್ಲರ ಮುಂದೆ ಬಹಿರಂಗಪಡಿಸಿದ್ದು ಸರಿಯಲ್ಲ. ಸಮಸ್ಯೆಗಳಿದ್ದರೆ ಹೇಳಿಕೊಳ್ಳುವ ಅಧಿಕಾರ ಇದೆ. ಆದರೆ ಸರ್ವಾಧಿಕಾರವಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ಯೋಗೇಶ್ವರ್ ದೂರು ನೀಡಿ ಬಂದಾಗಿದೆ. ಕೇಂದ್ರ ನಾಯಕರು ಕ್ರಮ ಕೈಗೊಳ್ಳುವವರೆಗೆ ಸುಮ್ಮನೆ ಇರಬೇಕು. ಅವರ ಮನಸ್ಸಿಗೆ ಸಂತೋಷ ಇದ್ದರೆ ಸಂಪುಟದಲ್ಲಿ ಇರಲಿ. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೊರಬರಲಿ, ಅದನ್ನು ಬಿಟ್ಟು ಬಿಜೆಪಿಯಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ ಎಂದು ಹೇಳಿದರು.

ಕುರ್ಚಿಗಾಗಿ ಕಾದಿದೆ ಕಾಂಗ್ರೆಸ್: ರಾಜ್ಯದಲ್ಲಿ ಅಧಿಕಾರಕ್ಕಾಗಿ ಕಾಂಗ್ರೆಸ್‌ನವರು ಹವಣಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸೇರಿ ಇಡೀ ಪಕ್ಷದವರು ಬಕಪಕ್ಷಿಯಂತೆ ಸಿಎಂ ಕುರ್ಚಿಗಾಗಿ ಕಾದು ಕುಳಿತಿದ್ದಾರೆ ಎಂದ ಈಶ್ವರಪ್ಪ ಟೀಕಿಸಿದರು. ಕಾಂಗ್ರೆಸ್‌ನವರು ಕರೊನಾ ವಿಚಾರದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದು ಮುಂದೆಯೂ ಸರ್ಕಾರಕ್ಕೆ ಸಲಹೆ-ಸಹಕಾರ ಅಗತ್ಯವಾಗಿದೆ. ಪ್ರತಿಪಕ್ಷದ ಹೊಣೆಗಾರಿಕೆ ಕೂಡ ಅದೇ ಆಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net