

ಶಿವಮೊಗ್ಗ: ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ನಾನು ಕೃಷಿ ಕ್ಷೇತ್ರಕ್ಕೆ ಬಹಳ ಇಷ್ಟಪಟ್ಟು ಬಂದವಳಲ್ಲ. ಕೃಷಿ ಕುಟುಂಬದ ನನ್ನ ಪತಿ ಬೆಂಗಳೂರಿಗೆ ಬರಲು ನಿರಾಕರಿಸಿದ್ದಕ್ಕೆ ನಾನೂ ಅನಿವಾರ್ಯವಾಗಿ ಅವರೊಟ್ಟಿಗೆ ಹಳ್ಳಿಯಲ್ಲೇ ಉಳಿಯಬೇಕಾಯಿತು ಎಂದು ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಗುರುವಾರ ರೈತ ದಸರಾ ಉದ್ಘಾಟಿಸಿ ಮಾತನಾಡಿದ ಅವರು, ಜೀವನೋಪಾಯಕ್ಕಾಗಿ ಕಲ್ಲು ಭೂಮಿಯಲ್ಲಿ ದಾಳಿಂಬೆ ಬೆಳೆ ಮಾಡಿ 50 ಲಕ್ಷ ರೂ. ಲಾಭವನ್ನೂ ನಿರೀಕ್ಷಿಸಿದ್ದೆ. ಆದರೆ ದಾಳಿಂಬೆ ಒಂದನ್ನೇ ನೆಚ್ಚಿಕೊಂಡಿದ್ದರಿಂದ ಅದರಿಂದ ನಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯನ್ನೂ ಮಾಡಿದ್ದೆ ಎಂದು ನೋವು ತೋಡಿಕೊಂಡರು.
ಆತ್ಮಹತ್ಯೆಯಂತಹ ಘಟನೆಯಿಂದ ಚೇತರಿಸಿಕೊಂಡ ಬಳಿಕ ಶ್ರೀಗಂಧ, ಪೇರಲೆ, ನೇರಳೆ ಸೇರಿದಂತೆ ಇತರೆ ಹಣ್ಣಿನ ಬೆಳೆಗಳನ್ನು ಮಾಡಿದೆ. ಜೇನು, ಕುರಿ, ಕೋಳಿ ಸಾಕಣೆ ಆರಂಭಿಸಿದೆ. ಇವುಗಳಿಂದ ಆದಾಯದ ಮೂಲ ಹೆಚ್ಚಾಯಿತು. ವಿವಿಧ ಪ್ರಶಸ್ತಿಗಳೂ ನನ್ನನ್ನು ಅರಸಿ ಬಂದಿವೆ ಎಂದರು.