

ಶಿವಮೊಗ್ಗ: ಸಿಗಂದೂರು ದೇವಾಲಯದ ಮೇಲುಸ್ತುವಾರಿ ಹಾಗೂ ಸಲಹಾ ಸಮಿತಿಯನ್ನು 15 ದಿನದಲ್ಲಿ ರದ್ದುಪಡಿಸದಿದ್ದರೆ ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಆರ್ಯ ಈಡಿಗರ ಸಂಘ ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸಮಿತಿ ಹಿಂಪಡೆಯದೆ ಇದ್ದರೆ ಸಿಗಂದೂರು ಉಳಿಸಿ ಹೋರಾಟ ಸಮಿತಿ ರಚಿಸಿಕೊಂಡು ಎಲ್ಲ ಸಮುದಾಯದ ಮುಖಂಡರು, ಜನಾಂಗದವರ ಬೆಂಬಲದೊಂದಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ಈಡಿಗ ಸಮಾಜದ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಬುಧವಾರ ಡಿಸಿ ಕೆ.ಬಿ.ಶಿವಕುಮಾರ್ಗೆ ನೀಡಿರುವ ಮನವಿಯಲ್ಲಿ ತಿಳಿಸಲಾಗಿದೆ.
ಸಿಗಂದೂರು ದೇವಾಲಯದ ಧರ್ಮದರ್ಶಿ ರಾಮಪ್ಪ ನೇತೃತ್ವದಲ್ಲಿ ವ್ಯವಸ್ಥಿತವಾಗಿ, ವಂಶಪಾರಂಪರ್ಯವಾಗಿ ದೇವಾಲಯದ ನಿರ್ವಹಣೆ ನಡೆಯುತ್ತಿದೆ. ಇದುವರೆಗೂ ಯಾವುದೇ ಲೋಪವಿಲ್ಲದೇ ಭಕ್ತರಿಗೆ ಊಟ, ವಸತಿ, ಕುಡಿಯುವ ನೀರು ಮುಂತಾದ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಹೀಗಿದ್ದರೂ ಸಲಹಾ ಸಮಿತಿಯ ಔಚಿತ್ಯವೇನು ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ.