ಅಧಿಕಾರ ಸಿಗುವ ಕಡೆ ಸಿದ್ದರಾಮಯ್ಯ: ಮಾಜಿ ಸಚಿವ ಈಶ್ವರಪ್ಪ ವಾಗ್ದಾಳಿ

Kse
Published on

ಶಿವಮೊಗ್ಗ: ಒಂದು ಕಾಲದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮಾಜವಾದಿ ಪಕ್ಷ, ಸ್ವಂತ ಪಕ್ಷ ಕಟ್ಟಬೇಕೆಂದು ಓಡಾಡಿದವರು. ಎಲ್ಲೆಲ್ಲಿ ಅಧಿಕಾರ ಸಿಗುತ್ತದೋ ಅಲ್ಲೆಲ್ಲ ಅವರು ಹೋಗಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ವಾತಂತ್ರ್ಯ ಬಂದ ನಂತರ ಸಿದ್ದರಾಮಯ್ಯ ಹುಟ್ಟಿದ್ದು. ತುರ್ತು ಪರಿಸ್ಥಿತಿ ಬರುವವರೆಗೂ ಸಿದ್ದರಾಮಯ್ಯ ಕಾಂಗ್ರೆಸ್ ವಿರೋಧಿಯಾಗಿದ್ದರು. ಇಂದಿರಾಗಾಂಧಿ ಅವರಿಗೆ ಧಿಕ್ಕಾರ ಹಾಕಿ ಜೈಲಿಗೆ ಹೋದವರು. ಜೈಲಿನಿಂದ ಹೊರಬಂದ ಸಂದರ್ಭದಲ್ಲೂ ಅವರಿಗೆ ರಾಷ್ಟ್ರದ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ ಎಂದರು.

ದಾವಣಗೆರೆ ಸಮಾವೇಶದಲ್ಲಿ ಜನ ಸೇರಿದ್ದಾರೆಂದ ಮಾತ್ರಕ್ಕೆ ಅಧಿಕಾರಕ್ಕೆ ಸಿಕ್ಕಿತ್ತೆಂಬ ಕನಸು ಕಾಣುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಲೋಕಸಭೆ, ವಿಧಾನಸಭೆ ಸೇರಿ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದ್ದು, ಕಾಂಗ್ರೆಸ್‌ಗೆ ಭ್ರಮನಿರಸನವಾಗಲಿದೆ. ಠೇವಣಿ ಕೂಡ ಸಿಗುವುದಿಲ್ಲ. ವಿರೋಧಪಕ್ಷದ ಸ್ಥಾನವನ್ನೂ ಕಳೆದುಕೊಳ್ಳುತ್ತಾರೆ ಎಂದರು.

ಬಿಜೆಪಿ, ಆರ್‌ಎಸ್‌ಎಸ್ ಕಚೇರಿ ಮೇಲೆ ಧ್ವಜ ಹಾರಿಸಲಿ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿ, ಸ್ವಾತಂತ್ರೊೃೀತ್ಸವಕ್ಕೂ, ಸಿದ್ದರಾಮಯ್ಯ ಅವರಿಗೂ ಏನು ಸಂಬಂಧ? ಸ್ವಾತಂತ್ರ್ಯ ಬರುವುದಕ್ಕೆ ರಾಷ್ಟ್ರಭಕ್ತರು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಸಿದ್ದರಾಮಯ್ಯ ಆಗ ಹುಟ್ಟಿಯೇ ಇರಲಿಲ್ಲ ಎಂದು ಛೇಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net