

ಶಿವಮೊಗ್ಗ: ಕರೊನಾ ಚಿಕಿತ್ಸೆ ಸಂದರ್ಭದಲ್ಲಿ ಅನಗತ್ಯವಾಗಿ ಸಿಟಿ ಸ್ಕಾೃನ್ ಮಾಡುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ಈ ಕುರಿತು ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಸೂಚನೆ ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಸೂಚನೆ ನೀಡಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರೊನಾ ನಿರ್ವಹಣೆ ಕುರಿತು ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಅವರು, ಸೋಂಕು ಪಾಸಿಟಿವಿಟಿ ಮತ್ತು ಸಾವಿನ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬೇಕು. ತೀರ ಅನಿವಾರ್ಯವಾದರೆ ಮಾತ್ರ ಸಿಟಿ ಸ್ಕಾೃನ್‌ಗೆ ಶಿಫಾರಸು ಮಾಡಬೇಕು ಎಂದು ಹೇಳಿದರು.
ರ‌್ಯಾಪಿಡ್, ಆರ್‌ಟಿಪಿಸಿಆರ್ ಮತ್ತು ಟ್ರೂನಟ್ ಮೂಲಕವೂ ಕರೊನಾ ಪತ್ತೆ ಮಾಡಬಹುದು. ಇಂತಹ ಸಂದರ್ಭದಲ್ಲಿ ಅನಿವಾರ್ಯತೆ ಇಲ್ಲದಿದ್ದರೂ ವೈದ್ಯರು ಸಿಟಿಸ್ಕಾೃನ್ ಮಾಡಿಸಿಕೊಳ್ಳುವಂತೆ ಸೂಚಿಸುತ್ತಾರೆ. ಇದು ಸೋಂಕಿತರಿಗೆ ಹೊರೆ ಆಗುತ್ತದೆ. ಆ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಾಗರದ ಎಸಿ ಡಾ. ಎಲ್.ನಾಗರಾಜ್ ಮಾತನಾಡಿ, ಸಾಗರದ ಎಲ್ಲ ವೈದ್ಯರು ಕರೊನಾ ಪತ್ತೆಗೆ ಸಿಟಿ ಸ್ಕಾೃನ್ ಮೊರೆ ಹೋಗುತ್ತಿದ್ದಾರೆ. ಆದರೆ ಸಾಗರದಲ್ಲಿ ಸಿಟಿ ಸ್ಕಾೃನ್‌ಗೆ ಅನುಕೂಲವಿಲ್ಲ. ಎಲ್ಲರೂ ಶಿವಮೊಗ್ಗದತ್ತ ಮುಖ ಮಾಡಿದ್ದಾರೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಎಚ್‌ಒ ಡಾ. ರಾಜೇಶ್ ಸುರಗೀಹಳ್ಳಿ, ಸಿಟಿ ಸ್ಕಾೃನ್‌ಗೆ ಕರೊನಾ ನಿಯಮಾವಳಿಯಲ್ಲಿ ಒಪ್ಪಿಗೆ ಇಲ್ಲ. ಸಾಗರದ ಎರಡು ಆಸ್ಪತ್ರೆಗಳಿಗೆ ಸಿಟಿ ಸ್ಕಾೃನ್‌ಗಳಿಗೆ ಶಿಫಾರಸು ಮಾಡಿದರೆ 1,500 ರೂ. ಎಬಿಆರ್‌ಕೆ(ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ)ಯಿಂದ ಹಣ ನೀಡಲಾಗುವುದು ಎಂದರು.