ಕುಡಿದು ಮಲಗಿದ್ದ ಕಾರ್ಮಿಕನ ಮೇಲೆ ಹರಿದ ರೈಲು !

26 smg aadhi
Published on

ಶಿವಮೊಗ್ಗ: ನಗರದ ಸವಳಂಗ ರಸ್ತೆ ರೈಲ್ವೆ ಹಳಿ ಮೇಲೆ ಶುಕ್ರವಾರ ರಾತ್ರಿ ಕುಡಿದು ಮಲಗಿದ್ದ ಕಾರ್ಮಿಕನ ಮೇಲೆ ರೈಲು ಹರಿದಿದ್ದು ಎಡಗಾಲು ತುಂಡಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಒಡಿಸ್ಸಾ ಮೂಲದ ಕಾರ್ಮಿಕನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಡಿಸ್ಸಾ ಮೂಲದ ಆದಿ ಅಲಿಯಾಸ್ ಸದ್ಪತಿ ಪಂಜಿ (23) ಕಾಲು ಕಳೆದುಕೊಂಡ ಕಾರ್ಮಿಕ. ಈತನನ್ನು ಒಡಿಸ್ಸಾದಿಂದ ಸವಳಂಗ ರಸ್ತೆಯ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಕರೆತರಲಾಗಿತ್ತು. ರಾತ್ರಿ ಮದ್ಯ ಸೇವಿಸಿದ್ದ ಈತ ರೈಲ್ವೆ ಹಳಿ ಮೇಲೆ ನಿದ್ರೆಗೆ ಜಾರಿದ್ದು ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲು ಕಾಲಿನ ಮೇಲೆ ಹರಿದಿದೆ.

ಅಪಘಾತದಲ್ಲಿ ಕಾಲು ಎರಡು ತುಂಡಾಗಿದ್ದು ರೈಲ್ವೆ ಹಳಿ ಮೇಲೆ ರಕ್ತ ಚಿಮ್ಮಿತ್ತು. ಅಪಘಾತದ ಬಳಿಕ ಚೀರಾಟ ಕೇಳಿದ ಸ್ಥಳೀಯರು ಸ್ಥಳಕ್ಕೆ ತೆರಳಿದಾಗ ಕಾಲು ಕಳೆದುಕೊಂಡು ನರಳಾಟ ನಡೆಸಿದ್ದ. ತಕ್ಷಣವೇ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂತ್ರ ವಿಸರ್ಜನೆಗೆ ಹೋಗಿದ್ನಾ ?:

ಸ್ಥಳೀಯರ ಪ್ರಕಾರ ಮದ್ಯ ಸೇವನೆ ಮಾಡಿ ಹಳಿ ಮೇಲೆ ಮಲಗಿದ್ದಾಗ ರೈಲು ಹರಿದಿದೆ. ಆದರೆ ಆತ ಮೂತ್ರ ವಿಸರ್ಜನೆಗೆ ತೆರಳಿದ್ದಾಗ ಅವಘಡ ಸಂಭವಿಸಿದೆ ಎಂದು ರೈಲ್ವೆ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆದರೆ ಆತನ ಗಂಭೀರವಾಗಿದ್ದು ಮಾತನಾಡುವ ಸ್ಥಿತಿಯಲ್ಲಿಲ್ಲ. ಹಾಗಾಗಿ ಮೂತ್ರ ವಿಸರ್ಜನೆಗೆ ತೆರಳಿದ್ದಾಗ ರೈಲು ಹರಿಯಿತೋ, ಕಂಠಪೂರ್ತಿ ಮದ್ಯ ಸೇವಿಸಿ ಹಳಿ ಮೇಲೆ ಮಲಗಿದ್ದನ್ನೋ ಅಥವಾ ಆತ್ಮಹತ್ಯೆಗೆ ಯತ್ನಿಸಿದ್ದನೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಶಿವಮೊಗ್ಗ ರೈಲ್ವೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net