ಸಂಕ್ರಾಂತಿ ಸಂಭ್ರಮ ಕಸಿದ ವಾರಾಂತ್ಯ ಕರ್ಫ್ಯೂ

15 smg 5
Published on

ಶಿವಮೊಗ್ಗ: ಕರೊನಾ ಮೂರನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆದೇಶ ಮಾಡಿರುವ ವಾರಾಂತ್ಯ ಕರ್ಫ್ಯೂಗೆ ಶನಿವಾರ ಸಂಕ್ರಾಂತಿ ಸಂಭ್ರಮದ ನಡುವೆಯೂ ಜಿಲ್ಲಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಯಿತು. ದಿನಸಿ ಹೊರತುಪಡಿಸಿ ಅಂಗಡಿ-ಮುಂಗಟ್ಟು ಬಂದ್ ಆಗಿದ್ದು ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಶಿವಮೊಗ್ಗ ನಗರ ಸೇರಿದಂತೆ ಬಹುತೇಕ ಮಲೆನಾಡಿನಲ್ಲಿ ಜನ ಮತ್ತು ವಾಹನ ಸಂಚಾರ ವಿರಳವಾಗಿತ್ತು.

ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಿದ್ದರಿಂದ ಪ್ರಮುಖ ವೃತ್ತ, ರಸ್ತೆಗಳು ಬಿಕೋ ಎನ್ನುತ್ತಿದ್ದವು. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಚಿತ್ರಮಂದಿರಗಳು, ಜಿಮ್, ಜವಳಿ, ಚಿನ್ನಾಭರಣ ಸೇರಿ ಜನಸಂದಣಿ ಹೆಚ್ಚಿರುವ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿತ್ತು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು, ಮೆಡಿಕಲ್ ಸ್ಟೋರ್, ಹಾಲಿನ ಬೂತ್‌ಗಳು, ತರಕಾರಿ, ಹಣ್ಣು, ಹೂವಿನ ಮಾರ್ಕೆಟ್ ಎಂದಿನಂತೆ ಕಾರ್ಯನಿರ್ವಹಿಸಿದವು.

ಅಶೋಕ ವೃತ್ತ, ಸಾಗರ ರಸ್ತೆ, ಎನ್.ಟಿ.ರಸ್ತೆ, ಅಮೀರ್ ಅಹ್ಮದ್ ವೃತ್ತ, ಗೋಪಿ ವೃತ್ತ, ಮಹಾವೀರ ವೃತ್ತ, ವಿನೋಬನಗರ ಪೊಲೀಸ್ ಚೌಕಿ, ನೆಹರು ಸ್ಟೇಡಿಯಂ, ಉಷಾ ನರ್ಸಿಂಗ್ ಹೋಮ್, ಹೊಳೆ ಬಸ್ ನಿಲ್ದಾಣ, ಎಂಆರ್‌ಎಸ್ ವೃತ್ತದಲ್ಲಿ ಪೊಲೀಸರು ಪಹರೆ ನಡೆಸಿದರು. ಬ್ಯಾರಿಕೇಡ್‌ಗಳನ್ನು ರಸ್ತೆ ಹಾಕಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರ ತಪಾಸಣೆ ನಡೆಸಿ ದಂಡ ವಿಧಿಸಿದರು.

ಕಿಕ್ ಇಳಿಸಿದ ಬಾರ್ ಬಂದ್:

ವಾರಾಂತ್ಯದಲ್ಲಿ ಮದ್ಯಪ್ರಿಯರಿಗೆ ಕಿಕ್ ಏರಿಸುತ್ತಿದ್ದ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಶುಕ್ರವಾರ ರಾತ್ರಿ 10ರಿಂದಲೇ ಬಂದ್ ಆಗಿದ್ದವು. ಹಾಗಾಗಿ ಸತತ ಎರಡನೇ ವೀಕೆಂಡ್ ಕರ್ಫ್ಯೂ ಮದ್ಯಪ್ರಿಯರಿಗೆ ಕಿಕ್ ಕೊಡಲಿಲ್ಲ. ಎರಡು ದಿನ ಸಂಪೂರ್ಣ ಬಂದ್ ಆಗಿರುವುದನ್ನು ಅರಿತ ಕೆಲವರು ಮುಂಚಿತವಾಗಿಯೇ ಖರೀದಿಸಿ ಸಂಗ್ರಹಿಸಿ ಸಂಭ್ರಮಿಸಿದ್ದು ಬಿಟ್ಟರೆ ಬಹುತೇಕ ಮಂದಿ ಮದ್ಯ ಸಿಗದೆ ಪರದಾಟ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net