

ಶಿವಮೊಗ್ಗ: ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ತರುವುದಾಗಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿರುವುದು ಸರಿಯಲ್ಲ. ವರದಿ ಬಗ್ಗೆ ಬಹಿರಂಗ ಚರ್ಚೆ ನಡೆಯಬೇಕು ಎಂದು ಬಂಜಾರ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಡಿ.ಆರ್.ಗಿರೀಶ್ ಒತ್ತಾಯಿಸಿದರು.
ಜನಾಶೀರ್ವಾದ ಯಾತ್ರೆ ಸಂದರ್ಭದಲ್ಲಿ ಎ.ಜೆ.ಸದಾಶಿವ ಆಯೋಗದ ವರದಿ ಬಗ್ಗೆ ವ್ಯಾಪಕ ಒಲವು ವ್ಯಕ್ತವಾಗಿದೆ. ಈ ವರದಿಯ ಶಿಫಾರಸು ಅನುಷ್ಠಾನಗೊಳಿಸುತ್ತೇವೆ ಎಂದು ಕೇಂದ್ರ ಸಚಿವರು ಹೇಳಿರುವುದು ಖಂಡನೀಯ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಒಳ ಮೀಸಲಾತಿ ಜಾರಿ ವಿಚಾರವಾಗಿ ಲಂಬಾಣಿ, ಭೋವಿ ಸಮುದಾಯದ ಶಾಸಕರು, ಮಠಾಧೀಶರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಸಚಿವರು ಸುಳ್ಳು ಹೇಳಿಕೆ ನೀಡಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಸಚಿವ ಎ.ನಾರಾಯಣಸ್ವಾಮಿ ಅಭಿವೃದ್ಧಿ ಬಗ್ಗೆ ಮಾತನಾಡುವುದನ್ನು ಬಿಟ್ಟು ಕೇವಲ ತಮ್ಮ ಸಮುದಾಯವನ್ನು ಓಲೈಸುವ ಸಲುವಾಗಿ ಒಳ ಮೀಸಲಾತಿ ವಿಚಾರವಾಗಿ ಹೇಳಿಕೆ ನೀಡಿದ್ದಾರೆ ಎಂದು ದೂರಿದರು.
ಬಂಜಾರ ಸಮುದಾಯದ ಪ್ರಮುಖರಾದ ಜಯಾ ನಾಯ್ಕ, ಮಂಜು ನಾಯ್ಕ, ಕಲ್ಲೇಶ್ ನಾಯ್ಕ, ಸುನೀಲ್ ನಾಯ್ಕ ಇತರರಿದ್ದರು.