ಪ್ರಕೃತ್ತಿದತ್ತವಾದ ವಿಜ್ಞಾನ ಅರಿತುಕೊಳ್ಳಿ; ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಲಹೆ

5 smg 5
Published on

ಶಿವಮೊಗ್ಗ: ದೊಡ್ಡ ಲ್ಯಾಬ್‌ಗಳಿಗೆ ಹೋಗಿ ಸಂಶೋಧನೆ ಮಾಡುವವರು ಮಾತ್ರ ವಿಜ್ಞಾನಿಗಳಲ್ಲ. ನಮ್ಮ ಸುತ್ತಮುತ್ತ ಪರಿಸರದಲ್ಲಿನ ಆಗು ಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಿ ಅಧ್ಯಯನ ಮಾಡಿ ಅನ್ವೇಷಣೆಗೆ ಒಳಪಡಿಸುವ ಮೂಲಕವೂ ಸಮರ್ಥ ವಿಜ್ಞಾನಿಗಳಾಗಲು ಸಾಧ್ಯವಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.

ಗೋಪಾಲಗೌಡ ಬಡಾವಣೆಯ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯಲ್ಲಿ ಶನಿವಾರ ಜ್ಞಾನ, ವಿಜ್ಞಾನ, ಸೃಜನಶೀಲ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ವಿಜ್ಞಾನಿಗಳಾಗಬೇಕೆಂದು ಬರೀ ಆಲೋಚನೆ ಮಾಡಿದರೆ ಸಾಲದು. ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳುವ ಮೂಲಕ ಬದುಕು ರೂಪಿಸಿಕೊಳ್ಳುವುದರಿಂದಲೂ ವಿಜ್ಞಾನಿಗಳಾಗಬಹುದು ಎಂದರು.

ವಿಜ್ಞಾನಿ ಆಗುವುದಕ್ಕೂ ಮುನ್ನ ಮೂಲ ವಿಜ್ಞಾನ ಕಲಿಯಬೇಕು. ಪ್ರಕೃತ್ತಿದತ್ತವಾದ ವಿಜ್ಞಾನವನ್ನು ಅರಿತುಕೊಳ್ಳಬೇಕು. ಮೂಲ ವಿಜ್ಞಾನ ಮತ್ತು ಅರ್ಥವ್ಯವಸ್ಥೆಯ ಬಗ್ಗೆ ಅಧ್ಯಯನ ನಡೆದರೆ ದೇಶದ ಅಭಿವೃದ್ಧಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮನಸ್ಸಿನಲ್ಲಿ ದೃಢ ಸಂಕಲ್ಪ ಹೊಂದಿರಬೇಕು ಎಂದು ಹೇಳಿದರು.

ಶಿವಮೊಗ್ಗ ಬಿಇಒ ಪಿ.ನಾಗರಾಜ್, ರಾಮಕೃಷ್ಣ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶೋಭಾ ವೆಂಕಟರಮಣ ಮಾತನಾಡಿದರು. ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ಸದಸ್ಯ ಡಿ.ಎಂ.ದೇವರಾಜ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ತೀರ್ಥೇಶ್, ಪ್ರಾಚಾರ್ಯ ಗಜೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net