

ಶಿವಮೊಗ್ಗ: ಕರೊನಾದಂತಹ ಸಂದಿಗ್ಧ ಸಂದರ್ಭದಲ್ಲಿ ಭಗವಂತನ ಸ್ಮರಣೆಯಿಂದ ಮನೋಸ್ಥೈರ್ಯ ವೃದ್ಧಿಸಿಕೊಂಡು ಸಂಕಷ್ಟವನ್ನು ಸಮರ್ಥವಾಗಿ ಎದುರಿಸಬೇಕಿದೆ ಎಂದು ನಗರದ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಬಿ.ಬೀರನಹಳ್ಳಿ ಸಮೀಪದ ವೆಂಕಟಾಪುರದಲ್ಲಿ ಬುಧವಾರ ಶ್ರೀ ತಿರುಮಲ ದೇವಸ್ಥಾನದ ಜೀರ್ಣೋದ್ಧಾರ ಮಹೋತ್ಸವದ ಅಂಗವಾಗಿ ಮಹಾ ಕುಂಭಾಭಿಷೇಕ, ಪೂರ್ಣಾಹುತಿ ಹಾಗೂ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕರೊನಾ ಹಾವಳಿಯಿಂದ ಜಗತ್ತೇ ಆತಂಕಕ್ಕೊಳಗಾಗಿದೆ. ಮನೋಸ್ಥೈರ್ಯ ಕಳೆದುಕೊಳ್ಳುವ ವ್ಯಕ್ತಿಗಳು ಜೀವ ಭಯದಿಂದ ತತ್ತರಿಸುತ್ತಿದ್ದಾರೆ. ಇಂತಹ ಸಂರ್ಭದಲ್ಲಿ ಮನೋಸ್ಥೈರ್ಯವೇ ಜನತೆಗೆ ಶಕ್ತಿ ಆಗಬೇಕಿದೆ ಎಂದರು.
ಯಾಗ, ಯಜ್ಞಗಳಿಂದ ಪ್ರಕೃತಿಯಲ್ಲಿ ವಿಶಿಷ್ಟ ಶಕ್ತಿ ಪ್ರವಹಿಸುತ್ತದೆ ಎಂಬ ನಂಬಿಕೆ ಇದೆ. ಈ ನಂಬಿಕೆಯೇ ಧಾರ್ಮಿಕ ಶ್ರದ್ಧೆಗೆ ಕಾರಣವಾಗಿದೆ. ಧಾರ್ಮಿಕ ಆಚರಣೆಯಲ್ಲಿ ಕಂದಾಚಾರ, ಮೂಢನಂಬಿಕೆ ಇದೆಯಾದರೂ ವೈಜ್ಞಾನಿಕತೆಯೂ ಇದೆ. ಇಂತಹ ವೈಜ್ಞಾನಿಕ ದೃಷ್ಟಿಕೋನದಿಂದ ಧಾರ್ಮಿಕ ಆಚರಣೆಗಳನ್ನು ನಡೆಸಿದಲ್ಲಿ ಫಲ ದೊರೆಯುತ್ತದೆ ಎಂದು ತಿಳಿಸಿದರು.
ಹೊಸದುರ್ಗ ಕುಂಚಟಿಗರ ಪೀಠದ ಶ್ರೀ ಶಾಂತವೀರ ಸ್ವಾಮೀಜಿ, ರೈತ ಮುಖಂಡ ಕೆ.ಟಿ.ಗಂಗಾಧರ್, ದೇವಸ್ಥಾನ ಸಮಿತಿ ಅಧ್ಯಕ್ಷ ಎನ್.ಎಚ್.ದೇವಕುಮಾರ, ಸಂಚಾಲಕ ಎಚ್.ಇ.ಗಡ್ಲಬಸಪ್ಪ, ಕಾರ್ಯದರ್ಶಿ ವಿ.ಎಚ್.ಬಸವರಾಜಪ್ಪ, ಖಜಾಂಚಿ ಕೆ.ಆರ್.ಅಜೇಯ, ಎಂ.ಪಿ.ದಿನೇಶ್‌ಪಟೇಲ್, ಕುಸುಮಾಕರ ಪಾಟೀಲ ಇದ್ದರು.