ಮದ್ಯ ಕುಡಿಸಿ ಅದೇ ಬಾಟಲಿಯಿಂದ ಹೊಡೆದು ಯುವಕನ ಹತ್ಯೆ

3 smg kiran
Published on

ಶಿವಮೊಗ್ಗ: ಶಿವಮೊಗ್ಗದಲ್ಲಿ ಮತ್ತೊಂದು ಕೊಲೆಯಾಗಿದೆ. ಇತ್ತೀಚೆಗಷ್ಟೇ ರೌಡಿಶೀಟರ್ ಹಂದಿ ಅಣ್ಣಿಯ ಕೊಲೆಯಾಗಿತ್ತು. ಇದೀಗ ಗಾಡಿಕೊಪ್ಪದಲ್ಲಿ ಸ್ನೇಹಿತರೇ ಹೊಸಮನೆಯ ಕಿರಣ್ ಎಂಬಾತನನ್ನು ಮದ್ಯದ ಬಾಟಲಿ ಮತ್ತು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ.

ಹೊಸಮನೆಯ ಪ್ರಜ್ವಲ್ ಮತ್ತು ಗಾಡಿಕೊಪ್ಪದ ಕಾರ್ತಿಕ್ ಕೊಲೆ ಮಾಡಿದ್ದು ವಿನೋಬನಗರ ಠಾಣೆ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಕಿರಣ್ ಮತ್ತು ಪ್ರಜ್ವಲ್ ಅಕ್ಕಪಕ್ಕದ ಮನೆಯವರು. ಹೊಸಮನೆ 3ನೇ ಕ್ರಾಸ್‌ನ ನಿವಾಸಿಗಳಾಗಿದ್ದು ಪ್ರಜ್ವಲ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ. ಅದಕ್ಕಾಗಿ ಪಾರ್ಟಿ ಕೊಡಿಸುವಂತೆ ಕಿರಣ್ ಕೇಳುತ್ತಿದ್ದ. ಹಾಗಾಗಿ ಮಂಗಳವಾರ ರಾತ್ರಿ ಕಿರಣ್, ಪ್ರಜ್ವಲ್ ಮತ್ತು ಕಾರ್ತಿಕ್ ಮೂವರು ಗಾಡಿಕೊಪ್ಪದ ಗಂಧರ್ವ ಬಾರ್ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಮದ್ಯ ಸೇವನೆ ಮಾಡಿದ್ದರು.

ಈ ವೇಳೆ ಕಿರಣ್ ಎರಡು ಸಾವಿರ ರೂ. ಕೊಡುವಂತೆ ಪ್ರಜ್ವಲ್‌ಗೆ ಕೇಳಿದ್ದ. ಹಣ ಕೊಡಲು ನಿರಾಕರಿಸಿದ್ದಕ್ಕೆ ಪ್ರಜ್ವಲ್ ಮತ್ತು ಕಾರ್ತಿಕ್ ಮೇಲೆ ಹಲ್ಲೆ ಕೂಡ ಮಾಡಿದ್ದ. ಇದರಿಂದ ಸಿಟ್ಟಿಗೆಟ್ಟ ಪ್ರಜ್ವಲ್ ಮತ್ತು ಕಾರ್ತಿಕ್, ಕಿರಣ್‌ಗೆ ಕಂಠಪೂರ್ತಿ ಮದ್ಯ ಕುಡಿಸಿ ಅದೇ ಬಾಟಲಿಯಿಂದ ತಲೆಗೆ ಹೊಡೆದಿದ್ದರು. ಪ್ರಜ್ಞೆ ತಪ್ಪಿ ಬಿದ್ದ ಕಿರಣ್ ಮುಖದ ಮೇಲೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದರು.

ತೀವ್ರ ರಕ್ತಸ್ರಾವದಿಂದ ಕಿರಣ್ ಸ್ಥಳದಲ್ಲೇ ಮೃತಪಟ್ಟಿದ್ದು, ಬುಧವಾರ ಬೆಳಗ್ಗೆ ದಾರಿಹೋಕರು ಕೊಲೆಯಾಗಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ವಿನೋಬನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆ ಮಾಡಿದ ಪ್ರಜ್ವಲ್ ಮತ್ತು ಕಾರ್ತಿಕ್‌ನನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net