

ಶಿವಮೊಗ್ಗ: ಮಂಗಳೂರಿನಲ್ಲಿ ಕುಕ್ಕರ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಶಾರೀಕ್ ಸೆರೆಯಾಗುತ್ತಿದ್ದಂತೆ ಇತ್ತ ತನಿಖೆಯನ್ನು ಚುರುಕುಗೊಳಿಸಿರುವ ಎನ್‌ಐಎ(ರಾಷ್ಟ್ರೀಯ ತನಿಖಾ ದಳ) ತಂಡ ಕಳೆದ ತಿಂಗಳು ಶಂಕಿತ ಉಗ್ರರು ತುಂಗಾ ನದಿ ತೀರಿದಲ್ಲಿ ನಡೆಸಿದ್ದ ಪ್ರಯೋಗಿಕ ಬಾಂಬ್ ಸ್ಫೋಟ ಮತ್ತು ರಾಷ್ಟ್ರಧ್ವಜ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಶಿವಮೊಗ್ಗಕ್ಕೆ ಭೇಟಿ ನೀಡಿ ಮತ್ತಷ್ಟು ಮಾಹಿತಿ ಕಲೆ ಹಾಕಿತು.
ಬೆಳಗ್ಗೆಯೇ ಶಿವಮೊಗ್ಗ ಗ್ರಾಮಾಂತರ ಠಾಣೆಗೆ ಭೇಟಿ ನೀಡಿದ್ದ ಐದಾರು ಅಧಿಕಾರಿಗಳಿದ್ದ ತಂಡವು ಗುರುಪುರ ಸಮೀಪದ ತುಂಗಾನದಿ ದಡದಲ್ಲಿ ನಡೆದಿದ್ದ ಬಾಂಬ್ ಸ್ಫೋಟದ ಬಗ್ಗೆ ಪೊಲೀಸರಿಂದ ಪ್ರಮುಖ ಆರೋಪಿ ತೀರ್ಥಹಳ್ಳಿಯ ಶಾರೀಕ್, ಮಾಜ್ ಮುನೀರ್ ಮತ್ತು ಸಯ್ಯದ್ ಯಾಸಿನ್ ಬಗ್ಗೆ ದಾಖಲೆ ಪರಿಶೀಲಿಸಿತು.
ಕಳೆದ ಸೆ.19ರಂದು ಮೂವರು ಶಂಕಿತ ಉಗ್ರರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಳಿಕ ಯುಎಪಿಎ ಕೇಸ್ ದಾಖಲಿಸಿದ್ದರು. ಅದೇ ಪ್ರಕರಣದಲ್ಲಿ ಶಂಕಿತ ಉಗ್ರರು ರಾಷ್ಟ್ರಧ್ವಜ ಸುಟ್ಟು ವಿಡಿಯೋ ಕೂಡ ಮಾಡಿದ್ದರಿಂದ ಎನ್‌ಐಎ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು. ಅದೇ ಪ್ರಕರಣ ಸಂಬಂಧ ಮಾಹಿತಿ ಕಲೆ ಹಾಕಲು ಎನ್‌ಐಎ ಮತ್ತೆ ಆಗಮಿಸಿತ್ತು.
ಪ್ರಕರಣದಲ್ಲಿ ಮಾಜ್ ಹಾಗೂ ಯಾಸೀನ್‌ನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದು ಪ್ರಮುಖ ಆರೋಪಿ ಶಾರೀಕ್ ನಾಪತ್ತೆಯಾಗಿದ್ದ. ಇತ್ತೀಚೆಗೆ ನಡೆದ ಮಂಗಳೂರು ಕುಕ್ಕರ್ ಸ್ಫೋಟದಲ್ಲಿ ಶಾರೀಕ್ ಬಂಧಿತನಾಗಿದ್ದಾನೆ. ಬಂಧಿತ ಮಾಜ್ ಮತ್ತು ಯಾಸಿರ್‌ನನ್ನು ಈಗಾಗಲೇ ವಶಕ್ಕೆ ಪಡೆದಿರುವ ಎನ್‌ಐಎ ತಂಡ ಬಾಂಬ್ ಸ್ಫೋಟ ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆ ನಡೆಸುತ್ತಿದೆ. ಇಬ್ಬರು ಆರೋಪಿಗಳು ಐಸಿಸ್ ಉಗ್ರರ ಜತೆಗೂ ನಂಟು ಹೊಂದಿರುವ ಆರೋಪ ಕೇಳಿಬಂದಿದ್ದು ಶಂಕಿತರಿಂದ ಈಗಾಗಲೇ ಮೊಬೈಲ್, ಪೆನ್‌ಡ್ರೈವ್ ಮತ್ತು ಲ್ಯಾಪ್‌ಟಾಪ್ ವಶಕ್ಕೆ ಪಡೆದು ಹೆಚ್ಚಿನ ಸಾಕ್ಷಿ ಸಂಗ್ರಹಿಸಲಾಗಿದೆ ಎನ್ನಲಾಗಿದೆ. ಕುಕ್ಕರ್ ಸ್ಫೋಟದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿರುವ ಶಾರಿಖ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಿದೆ.