

ಶಿವಮೊಗ್ಗ: ನಗರದ ನ್ಯೂಮಂಡ್ಲಿಯಲ್ಲಿ ವಿವಾಹಿತೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಪತಿ ಮತ್ತು ಆತನ ಕುಟುಂಬದವರ ಮೇಲೆ ಜಾತಿ ನಿಂದನೆ ಮತ್ತು ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ.
ನ್ಯೂಮಂಡ್ಲಿಯ ಲಕ್ಷ್ಮೀ (23) ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ. ಪತಿ ನಾಗರಾಜ್, ಮಾವ ಪರಶುರಾಮ ಮತ್ತು ಅತ್ತೆ ವಿಜಯಲಕ್ಷ್ಮೀ ವಿರುದ್ಧ ಲಕ್ಷ್ಮೀ ತಾಯಿ ರತ್ನಮ್ಮ ದೂರು ನೀಡಿದ್ದಾರೆ. ನಾಲ್ಕು ವರ್ಷದ ಹಿಂದೆ ನಾಗರಾಜ್ ಜತೆ ಕಾಶಿಪುರದ ಲಕ್ಷ್ಮೀ ಮದುವೆಯಾಗಿತ್ತು. ದಂಪತಿಗೆ ಎರಡೂವರೆ ವರ್ಷದ ಹೆಣ್ಣು ಮಗುವಿದ್ದು ಆರಂಭದಲ್ಲಿ ಒಂದು ವರ್ಷ ದಾಂಪತ್ಯ ಜೀವನ ಚೆನ್ನಾಗಿತ್ತು. ಆನಂತರ ಲಕ್ಷ್ಮೀಗೆ ಪತಿ ಸೇರಿದಂತೆ ಅತ್ತೆ-ಮಾವ ಜಾತಿ ನಿಂದನೆ ಮಾಡಿ ಹಲವಾರು ಬಾರಿ ಮನೆಯಿಂದ ಹೊರಗೆ ಹಾಕಿದ್ದರು. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿ ರಾಜಿ ಪಂಚಾಯಿತಿ ನಡೆದಿತ್ತು. ಕಾಶಿಪುರದಲ್ಲಿದ್ದ ಲಕ್ಷ್ಮೀಯನ್ನು ತಾಯಿ ರತ್ನಮ್ಮ ಮತ್ತು ಚಿಕ್ಕಮ್ಮ ರುಕ್ಕಮ್ಮ ನ್ಯೂಮಂಡ್ಲಿಗೆ ಗುರುವಾರ ಕರೆದುಕೊಂಡು ಬಂದಿದ್ದರು. ಆದರೆ ಗಂಡ, ಅತ್ತೆ-ಮಾವ ಮನೆಯಲ್ಲಿದ್ದರೂ ಬಾಗಿಲು ತೆರೆದಿರಲಿಲ್ಲ. ಮಧ್ಯಾಹ್ನ 3 ಗಂಟೆವರೆಗೆ ಮೂವರೂ ಮನೆ ಹೊರಗಡೆ ಕುಳಿತಿದ್ದರು.
ಆನಂತರ ಲಕ್ಷ್ಮೀಯನ್ನು ಅಲ್ಲೇ ಬಿಟ್ಟು ಊಟ ತರಲೆಂದು ರತ್ನಮ್ಮ ಮತ್ತು ರುಕ್ಕಮ್ಮ ತೆರಳಿದ್ದು ವಾಪಸ್ ಬರುವಷ್ಟರಲ್ಲೇ ಲಕ್ಷ್ಮೀ ನೇಣುಬಿಗಿದ ಸ್ಥಿತಿಯಲ್ಲಿದ್ದರು. ತಕ್ಷಣವೇ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದಿದ್ದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದರು. ಮದುವೆ ಸಂದರ್ಭದಲ್ಲಿ 50 ಸಾವಿರ ರೂ. ನಗದು, ಒಂದು ತೊಲ ಬಂಗಾರದ ಸರವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಆದರೆ ಮದುವೆಯಾದ ಬಳಿಕ ಗಂಡನ ಮನೆಯವರು ಕೀಳು ಜಾತಿಯವಳೆಂದು ನಿಂದಿಸಿದಲ್ಲದೆ, ಅಪ್ಪನಿಂದ ಜಮೀನು ಅಥವಾ ಹಣ ಕೊಡಿಸು ಎಂದು ಮಾನಸಿಕ, ದೈಹಿಕ ಹಿಂದೆ ನೀಡಿ ವೇಲ್‌ನಿಂದ ಬಿಗಿದು ಕೊಲೆ ಮಾಡಿದ್ದಾರೆಂದು ದೊಡ್ಡಪೇಟೆ ಠಾಣೆಗೆ ದೂರು ನೀಡಲಾಗಿದೆ.