ಸುಳಿವು ಸಿಕ್ಕಿದ್ದು 10 ಕೋಟಿ ರೂ. ದಕ್ಕಿದ್ದು ಬಟ್ಟೆ ಬಂಡಲ್ !

18 smg 11
Published on

ಶಿವಮೊಗ್ಗ: ಮುಂಬೈನಿಂದ ಶಿವಮೊಗ್ಗಕ್ಕೆ ಬರುತ್ತಿರುವ ಈಸ್ಟ್ ವೆಸ್ಟ್ ಬಸ್‌ನಲ್ಲಿ ಬಸ್‌ನಲ್ಲಿ ಅಕ್ರಮವಾಗಿ 10 ಕೋಟಿ ರೂ. ಸಾಗಿಸಲಾಗುತ್ತಿದೆ ಎಂದು ಲಭ್ಯವಾದ ಅನಾಮಧೇಯ ಕರೆಯ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದು, ಬಸ್‌ನಲ್ಲಿ ನಗದು ಬದಲಿಗೆ 8 ಲಕ್ಷ ರೂ. ಮೌಲ್ಯದ ಬಟ್ಟೆ ಬಂಡಲ್ ಸಿಕ್ಕಿದೆ.

ಶುಕ್ರವಾರ ರಾತ್ರಿ ಮುಂಬೈನಿಂದ ಹೊರಟಿರುವ ಬಸ್‌ನಲ್ಲಿ ಬಟ್ಟೆ ಬಂಡಲ್‌ಗಳನ್ನು ಸಾಗಿಸಲಾಗುತ್ತಿದ್ದು, ಅದರಲ್ಲಿ ಅಕ್ರಮವಾಗಿ ಕೋಟಿ ಕೋಟಿ ರೂ. ಹಣ ಸಾಗಿಸಲಾಗುತ್ತಿದೆ ಎಂದು ಅನಾಮಧೇಯ ವ್ಯಕ್ತಿ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಈ ಮಾಹಿತಿ ಆಧರಿಸಿ ಶನಿವಾರ ಬೆಳಗ್ಗೆ ಬಿ.ಎಚ್.ರಸ್ತೆಯ ಸೋಮಯ್ಯ ಲೇಔಟ್ ಕ್ರಾಸ್ ಬಳಿ ದಾಳಿ ನಡೆಸಿದ ಪೊಲೀಸರಿಗೆ 8 ಲಕ್ಷ ರೂ. ಮೌಲ್ಯದ ಬಟ್ಟೆ ಬಂಡಲ್‌ಗಳು ಸಿಕ್ಕಿದೆ.

ದೊಡ್ಡಪೇಟೆ ಠಾಣೆ ಪಿಎಸ್‌ಐ ವಸಂತ್ ನೇತೃತ್ವದಲ್ಲಿ ಐವರು ಪೇದೆಗಳು ಬಸ್‌ನ್ನು ತಡೆದು ತಪಾಸಣೆಗೆ ಒಳಪಡಿಸಿದಾಗ ದಾಖಲೆ ಇಲ್ಲದ ಶಿವಮೊಗ್ಗ, ಭದ್ರಾವತಿ ಸೇರಿ ಜಿಲ್ಲೆಯ ಹಲವು ಬಟ್ಟೆ ಅಂಗಡಿಗಳ 40 ಬಂಡಲ್ ಬಟ್ಟೆ ಪತ್ತೆಯಾಗಿವೆ. ಬಟ್ಟೆ ಬಂಡಲ್ನಲ್ಲಿ ಹಣ ಸಾಗಿಸಲಾಗುತ್ತಿದೆ ಎಂಬ ದೂರು ಬಂದ ಹಿನ್ನಲೆಯಲ್ಲಿ ವೀರಭದ್ರೇಶ್ವರ ಟಾಕೀಸ್ ಬಳಿಯಿರುವ ಈಸ್ಟ್ ವೆಸ್ಟ್ ಕಚೇರಿ ಬಳಿ ಪ್ರಯಾಣಿಕರನ್ನೂ ತಪಾಸಣೆಗೆ ಒಳಪಡಿಸಲಾಗಿದೆ. ವಿವಿಧ ಬಟ್ಟೆ ಅಂಗಡಿಗಳಿಗೆ ಸೇರಿದ ಬಟ್ಟೆಗಳ ಮೌಲ್ಯ 8 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಎಲ್ಲ ಬಟ್ಟೆ ಸರಕುಗಳನ್ನು ವಾಣಿಜ್ಯ ತೆರಿಗೆ ಸಿಟಿಒ ಅಧಿಕಾರಿ ನಾಗರಾಜ್ ಅವರಿಗೆ ಹಸ್ತಾಂತರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net