

ಶಿವಮೊಗ್ಗ: ಸಂಕ್ರಾತಿಗೆ ಜಿಲ್ಲೆಯ ವಿವಿಧೆಡೆ ಬುಧವಾರ ಸಂಭ್ರಮ ಸಡಗರದ ಸಿದ್ಧತೆಗಳು ನಡೆದಿವೆ. ಹೂವಿನ ಮಾರುಕಟ್ಟೆ ಸೇರಿ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಹಬ್ಬದ ಖರೀದಿಯ ಭರಾಟೆ ಜೋರಾಗಿ ಸಾಗಿತ್ತು.
ಸಂಕ್ರಾಂತಿ ಅಂಗವಾಗಿ ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಕಬ್ಬು, ಸಿದ್ಧಪಡಿಸಿದ ಎಳ್ಳುಬೆಲ್ಲದ ಬೆಲೆ ಏರಿಕೆಯಾಗಿತ್ತು. ಮನೆಯಲ್ಲಿ ಬೆಲ್ಲ, ಅಕ್ಕಿ, ತುಪ್ಪದಿಂದ ಪೊಂಗಲ್, ಹೋಳಿಗೆ, ಪಾಯಸ, ರೊಟ್ಟಿ, ಪಲ್ಯ ವಿವಿಧ ರೀತಿಯ ಅಡುಗೆ ತಯಾರಿಸಲು ನಾಗರಿಕರು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ ಎಳ್ಳು ತಯಾರಿಸಿ ವಿವಿಧ ಬಣ್ಣಗಳ ಸಕ್ಕರೆ ಅಚ್ಚುಗಳೊಂದಿಗೆ ಮಾರಾಟ ಮಾಡಲಾಯಿತು. ನಗರದ ವೀರಶೈವ ಕಲ್ಯಾಣ ಮಂದಿರ ರಸ್ತೆ, ಗೋಪಿ ವೃತ್ತ, ಲಕ್ಷ್ಮೀ ಚಿತ್ರಮಂದಿರ ವೃತ್ತ ಮುಂತಾದೆಡೆ ಸಂಕ್ರಾಂತಿಗೆ ಅಗತ್ಯವಿರುವ ವಸ್ತುಗಳನ್ನು ಸಾರ್ವಜನಿಕರು ಸಂಭ್ರಮದಿಂದ ಖರೀದಿಸಿದರು. ಪ್ರಮುಖ ವ್ಯಾಪಾರ ಕೇಂದ್ರಗಳಾದ ಗಾಂಧಿಬಜಾರ್, ದುರ್ಗಿಗುಡಿ, ಸವಳಂಗ ರಸ್ತೆ, ನೆಹರು ರಸ್ತೆ ಮುಂತಾದೆಡೆ ಹಬ್ಬದ ಖರೀದಿ ಹಿನ್ನೆಲೆಯಲ್ಲಿ ಜನರಿಂದ ಕಿಕ್ಕಿರಿದು ತುಂಬಿತ್ತು.