

ಶಿವಮೊಗ್ಗ: ಕನ್ನಡದ ನೆಲ, ಜಲ, ಭಾಷೆ ಸಂರಕ್ಷಣೆಗೆ ಸರ್ಕಾರ ಎಲ್ಲ ರೀತಿಯಲ್ಲೂ ಹೆಗಲು ಕೊಟ್ಟಿದ್ದು ನಾಡು-ನುಡಿ ರಕ್ಷಣೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಕನ್ನಡ ನಮ್ಮ ಬದುಕು ಮತ್ತು ಉಸಿರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಮಂಗಳವಾರ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ 67ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡವನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಕಂಕಣಬದ್ಧರಾಗಗಬೇಕಿದೆ ಎಂದು ಕರೆ ನೀಡಿದರು.
ಎರಡು ಸಾವಿರ ವರ್ಷಕ್ಕೂ ಅಧಿಕ ಸಾಂಸ್ಕೃತಿಕ ಇತಿಹಾಸವುಳ್ಳ ಕನ್ನಡ ಭಾಷೆಯ ಸಾಹಿತ್ಯ ಪರಂಪರೆ ಶ್ರೀಮಂತವಾಗಿದೆ. ಈ ವರ್ಷ ಕೋಟಿ ಕಂಠ ಗಾಯನ ಅಭಿಯಾನದಲ್ಲಿ ಕನ್ನಡ ಗೀತೆಗಳ ಗಾಯನವನ್ನು ಮೊಳಗಿಸುವ ಮೂಲಕ ಭಾಷಾಭಿಮಾನ ಎತ್ತಿ ಹಿಡಿಯಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಮ್ಮ ಸರ್ಕಾರಗಳು ಹಲವಾರು ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ. ಮುಖ್ಯಮಂತ್ರಿಗಳ 13 ಅಮೃತ ಯೋಜನೆಗಳು, ರೈತ ವಿದ್ಯಾನಿಧಿ, ಗ್ರಾಮ ಒನ್, ವಿವೇಕಾನಂದ ಯುವ ಶಕ್ತಿ ಯೋಜನೆ, ಬೆಳಕು ಮುಂತಾದ ಯೋಜನೆಗಳ ಮೂಳಕ ರಾಜ್ಯವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಎಂಎಲ್‌ಸಿ ಡಿ.ಎಸ್.ಅರುಣ್, ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಮುಖಂಡ ಎಸ್.ದತ್ತಾತ್ರಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಡಿಸಿ ಆರ್.ಸೆಲ್ವಮಣಿ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಎಎಸ್ಪಿ ಡಾ. ವಿಕ್ರಂ ಆಮಟೆ, ಜಿಪಂ ಸಿಇಒ ಎನ್.ಡಿ.ಪ್ರಕಾಶ್, ಎಡಿಸಿ ಡಾ. ನಾಗೇಂದ್ರ ಹೊನ್ನಾಳ್ಳಿ, ಸ್ಮಾರ್ಟ್‌ಸಿಟಿ ಎಂಜಿ ಚಿದಾನಂದ ವಟಾರೆ, ಪ್ರಬೋಷನರಿ ಐಎಎಸ್ ಅಧಿಕಾರಿ ದಾಲ್ಜಿತ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.