

ಶಿವಮೊಗ್ಗ: ಧರ್ಮದ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ. ತಪ್ಪಿತಸ್ಥ ಯಾವ ಜಾತಿ ಅಥವಾ ಧರ್ಮದವರೇ ಆದರೂ ಬಿಡುವ ಮಾತಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದರು.
ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಧ್ಯಾಹ್ನ ಫ್ಲೆಕ್ಸ್ ವಿವಾದ ಮತ್ತು ಯುವಕನಿಗೆ ಚಾಕು ಇರಿತ ಕುರಿತು ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಒಬ್ಬರು ಹೇಳುತ್ತಾರೆ ಎಂದ ಮಾತ್ರಕ್ಕೆ ಧರ್ಮಾಧಾರಿತವಾಗಿ ಕಾನೂನು ಕ್ರಮ ಕೈಗೊಳ್ಳುವುದು ತಪ್ಪಾಗುತ್ತದೆ. ಗೃಹ ಇಲಾಖೆ ಎಲ್ಲರನ್ನೂ ಒಂದು ಗೂಡಿಸಿಕೊಂಡು ಹೋಗಬೇಕಾಗುತ್ತದೆ. ಹಾಗಾಗಿ ತಪ್ಪಿತಸ್ಥರ ಮೇಲೆ ಮಾತ್ರ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದರು.
ಇಲ್ಲಿ ಗೃಹ ಇಲಾಖೆ ಕಾರ್ಯವೈಖರಿ ಪಾಸ್ ಅಥವಾ ಫೇಲ್ ಆಗಿದೆ ಎಂದು ಹೋಲಿಕೆ ಮಾಡುವುದಕ್ಕಿಂತ ಇಂತಹ ಕೃತ್ಯಗಳು ನಡೆಯಬಾರದಿತ್ತು. ಆದರೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಸಂದೇಶಗಳನ್ನು ಹರಿಬಿಟ್ಟಿರುವ ಕಾರಣ ಇಂತಹ ಗೊಂದಲಗಳು ಸೃಷ್ಟಿಯಾಗುತ್ತಿವೆ. ಶಿವಮೊಗ್ಗ, ಭದ್ರಾವತಿ ಬಳಿಕ ತುಮಕೂರಿನಲ್ಲೂ ವೀರ ಸಾವರ್ಕರ್ ಫ್ಲೆಕ್ಸ್ ಹರಿದುಹಾಕಲಾಗಿದೆ. ಮಂಗಳೂರಿನಲ್ಲೂ ಅಡ್ಡಿಪಡಿಸಲಾಗಿದೆ. ಹಲವರಿಗೆ ವೀರ ಸಾವರ್ಕರ್ ಬಗ್ಗೆ ಅರಿವಿಲ್ಲ. ಅಂಡಮಾನ್ ಸೆಲ್ಯುಲರ್ ಜೈಲಿಗೆ ಹೋದರೆ ಅವರ ಸ್ವಾತಂತ್ರೃ ಹೋರಾಟದ ಬಗ್ಗೆ ತಿಳಿಯುತ್ತದೆ ಎಂದರು.
ಶಿವಮೊಗ್ಗ, ಭದ್ರಾವತಿಯಲ್ಲಿ ಬಿಗಿ ಕ್ರಮ: ಉಭಯ ನಗರಗಳಲ್ಲಿ ಫ್ಲೆಕ್ಸ್ ವಿವಾದ, ಚಾಕು ಇರಿತ ಮತ್ತು ಹಲ್ಲೆ ಪ್ರಕರಣದ ಬಗ್ಗೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಎಲ್ಲ ರೀತಿಯ ಬಿಗಿ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಅದರಂತೆ ಈಗಾಗಲೇ ಆರ್‌ಎಎಫ್ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸರನ್ನು ಶಿವಮೊಗ್ಗಕ್ಕೆ ಕರೆಸಿಕೊಳ್ಳಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಎಡಿಜಿಪಿ ಅಲೋಕ್‌ಕುಮಾರ್, ಐಜಿಪಿ ತ್ಯಾಗರಾಜನ್ ಖುದ್ದು ಮೊಕ್ಕಂ ಹೂಡಿದ್ದಾರೆ ಎಂದು ಆರಗ ಜ್ಞಾನೇಂದ್ರ ಹೇಳಿದರು.