

ಶಿವಮೊಗ್ಗ: ಗಣೇಶೋತ್ಸವಕ್ಕೆ ಯಾರೇ ಅಡ್ಡಿ ಮಾಡಿದರೂ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮುಸ್ಲಿಮರ ಯಾವ ಹಬ್ಬಕ್ಕೂ ಯಾವತ್ತೂ ಅಡ್ಡಿಪಡಿಸಿಲ್ಲ. ಒಂದು ವೇಳೆ ಗಣೇಶೋತ್ಸವಕ್ಕೆ ಅಡ್ಡಿಪಡಿಸಲು ಮುಂದಾದರೆ ಬೆಲೆ ತೆರುಬೇಕಾಗುತ್ತದೆ ಎಂದು ಗುಡುಗಿದರು.
ರಾಜ್ಯದಲ್ಲಿ ಪಿಎಫ್‌ಐ ಮತ್ತು ಎಸ್‌ಡಿಪಿಐ ರದ್ದು ಮಾಡುವುದಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಒಪ್ಪಿಗೆ ಬೇಕಿಲ್ಲ. ಯಾವಾಗ ರದ್ದು ಮಾಡಬೇಕೋ ಆವಾಗ ಮಾಡುತ್ತೇವೆ. ಹಿಂಸೆ ಇಲ್ಲದೆ ರಾಷ್ಟ್ರದ್ರೋಹಿಗಳನ್ನು ಹತ್ತಿಕ್ಕುವುದು ಬಿಜೆಪಿಗೆ ಗೊತ್ತಿದೆ. ಸಮಾಜದಲ್ಲಿ ಎಸ್‌ಡಿಪಿಐ ಮತ್ತು ಕಾಂಗ್ರೆಸ್‌ನಿಂದ ಅಶಾಂತಿ ಉಂಟಾಗುತ್ತಿದ್ದು ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಆಶಾಂತಿಯ ವಾತಾವರಣ ಸೃಷ್ಟಿಸಲು ಇಂತಹ ಕೃತ್ಯಗಳನ್ನು ಮಾಡಿಸುತ್ತಿದಾರೆ ಎಂದು ಆರೋಪಿಸಿದರು.